ADVERTISEMENT

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ:ಬಿಜೆಪಿ ಜಯಭೇರಿ, ಖಾತೆ ತೆರೆದ ಎಎಪಿ

BJP set to retain power in six Gujarat municipal corporations

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 16:04 IST
Last Updated 23 ಫೆಬ್ರುವರಿ 2021, 16:04 IST
ಗುಜರಾತ್‌ನ ಸೂರತ್‌ ನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು
ಗುಜರಾತ್‌ನ ಸೂರತ್‌ ನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು   

ಅಹಮದಾಬಾದ್: ಗುಜರಾತ್‌ನ ಆರು ನಗರಗಳ ಸ್ಥಳೀಯ ಸಂಸ್ಥೆಗಳಿಗೆ ನಡೆದಿದ್ದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಜಯಭೇರಿ ಬಾರಿಸಿದ್ದು, ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ರಾತ್ರಿಯವರೆಗೆ ಫಲಿತಾಂಶ ಘೋಷಣೆಯಾಗಿದ್ದ 474 ಸ್ಥಾನಗಳಲ್ಲಿ ಬಿಜೆಪಿ ಒಟ್ಟು 409 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ ಸಾಧನೆ ನೀರಸವಾಗಿದ್ದು, 43 ಸ್ಥಾನವನ್ನಷ್ಟೇ ಗೆದ್ದುಕೊಂಡಿತ್ತು. ಎಎಪಿ ಮತ್ತು ಎಐಎಂಐಎಂ ಪಕ್ಷ ಖಾತೆ ತೆರೆದಿವೆ.

ಫೆಬ್ರುವರಿ 21ರಂದು ಆರು ಸ್ಥಳೀಯ ಸಂಸ್ಥೆಗಳ 575 ಸ್ಥಾನಗಳು ಅಂದರೆ ಅಹಮದಾಬಾದ್‌ನ 192, ರಾಜಕೋಟ್‌ 72, ಜಾಮ್‌ನಗರ 64, ಭಾವನಗರ 76, ವಡೋದರಾ 76, ಸೂರತ್‌ ನಗರಪಾಲಿಕೆಯ 120 ಸ್ಥಾನಗಳಿಗೆ ಚುನಾವಣೆಯು ನಡೆದಿತ್ತು. ಮತ ಎಣಿಕೆ ಮಂಗಳವಾರ ಬೆಳಿಗ್ಗೆ ಆರಂಭವಾಗಿದ್ದು, ರಾತ್ರಿಯವರೆಗೂ ಮುಂದುವರಿದಿತ್ತು.

ADVERTISEMENT

ಆಮ್ ಅದ್ಮಿ ಪಕ್ಷ (ಎಎಪಿ) ಒಟ್ಟಾರೆ 470 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸೂರತ್‌ ನಗರಪಾಲಿಕೆಯಲ್ಲಿ ಎಎಪಿ ಉತ್ತಮ ಸಾಧನೆ ಮಾಡಿದ್ದು, ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಕಾಂಗ್ರೆಸ್‌ ಇಲ್ಲಿ ಖಾತೆ ತೆರೆಯಲೂ ವಿಫಲವಾಗಿದೆ.

‌ಸೂರತ್‌ನಲ್ಲಿ 2015ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನ ಗೆದ್ದುಕೊಂಡಿತ್ತು. ಇಲ್ಲಿ ಒಟ್ಟು ಸದಸ್ಯ ಬಲ 120 ಆಗಿದ್ದು, ಬಿಜೆಪಿ 93, ಎಎಪಿ 27 ಸ್ಥಾನಗಳನ್ನು ಗೆದ್ದುಕೊಂಡಿವೆ.

ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷವು ಅಹಮದಾಬಾದ್‌ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 8 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಖಾತೆ ತೆರೆದಿದೆ. ಇಲ್ಲಿ ಮೊದಲು ಕಾಂಗ್ರೆಸ್ ಪ್ರಾಬಲ್ಯವನ್ನು ಹೊಂದಿತ್ತು.

ಮುಖ್ಯಮಂತ್ರಿ ವಿಜಯ್‌ ರೂಪಾಣಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್‌ ಅವರು ಫಲಿತಾಂಶ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ‘ಇದು, ಪ್ರಧಾನಿಯವರ ಅಭಿವೃದ್ಧಿ ರಾಜಕಾರಣಕ್ಕೆ ಸಂದ ಗೆಲುವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.