ಬಿಜೆಪಿ
ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಕ್ಕೂ ಮೊದಲು, ವಿವಿಧ ರಾಜ್ಯಗಳ ಅಧ್ಯಕ್ಷರನ್ನು ಆಯ್ಕೆ ಮಾಡಿ ಪಕ್ಷ ಮಂಗಳವಾರ ಘೋಷಿಸಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಆರಂಭಿಸಲು ಪಕ್ಷ ನಿರ್ಧರಿಸಿದ್ದು, ಇದಕ್ಕೆ ಪೂರಕವಾಗಿ ವಿವಿಧ ರಾಜ್ಯಗಳ ಅಧ್ಯಕ್ಷರ ಆಯ್ಕೆಗೆ ಪಕ್ಷ ಮುಂದಾಗಿದೆ. ಪಕ್ಷದ ಸಂವಿಧಾನದ ಪ್ರಕಾರ ಅದರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಪೂರ್ವದಲ್ಲಿ 37 ಸಂಘಟನಾ ರಾಜ್ಯಗಳಲ್ಲಿ ಕನಿಷ್ಠ 19 ರಾಜ್ಯಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಇದಕ್ಕೆ ಚಾಲನೆ ದೊರೆತಿದೆ.
ಅದರಂತೆಯೇ ಪುದಚೇರಿಗೆ ವಿ.ಪಿ.ರಾಮಲಿಂಗಮ್, ಮಿಜೊರಾಂ ಅಧ್ಯಕ್ಷರಾಗಿ ಕೆ. ಬೀಚ್ಚುವಾ ಅವರನ್ನು ಅಲ್ಲಿನ ರಾಜ್ಯಾಧ್ಯಕ್ಷರೆಂದು ಪಕ್ಷವು ಸೋಮವಾರ ಘೋಷಿಸಲಾಗಿದೆ. ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕ್ರಮವಾಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಔಪಚಾರಿಕವಾಗಿ ಚುನಾವಣಾ ಪ್ರಕ್ರಿಯೆ ಮಂಗಳವಾರ ನಡೆಯಲಿದೆ.
ತೆಲಂಗಾಣಕ್ಕೆ ರಾಮಚಂದ್ರ ರಾವ್ ಹಾಗೂ ಆಂಧ್ರಪ್ರದೇಶಕ್ಕೆ ಪಿ.ವಿ.ಎನ್. ಮಾಧವ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ. ಮಹಾರಾಷ್ಟ್ರದಲ್ಲಿ ಚಂದ್ರಶೇಖರ ಬವಾಂಕುಳೆ ಅವರ ಸ್ಥಾನಕ್ಕೆ ನಾಲ್ಕು ಬಾರಿ ಶಾಸಕರಾಗಿರುವ ರವೀಂದ್ರ ಚವ್ಹಾಣ್ ಹಾಗೂ ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಮಹೇಂದ್ರ ಭಟ್ ಅವರನ್ನು ಅಧ್ಯಕ್ಷರನ್ನಾಗಿ ಬಿಜೆಪಿ ನೇಮಿಸಿದೆ.
16 ರಾಜ್ಯಗಳಲ್ಲಿ ಪಕ್ಷವು ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಇವರಲ್ಲಿ ಕೆಲವರು ಮರು ಆಯ್ಕೆಗೊಂಡಿದ್ದಾರೆ. ಕರ್ನಾಟಕ ಹಾಗೂ ಮಧ್ಯಪ್ರದೇಶದ ರಾಜ್ಯಾಧ್ಯಕ್ಷರ ಆಯ್ಕೆಯೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆಗೆ ಪಕ್ಷ ಮುಂದಡಿ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಜೆ.ಪಿ. ನಡ್ಡ ಅವರು ಪಕ್ಷದ ಹಾಲಿ ಅಧ್ಯಕ್ಷರಾಗಿದ್ದು, ಅವರ ಜಾಗಕ್ಕೆ ನೂತನ ಅಧ್ಯಕ್ಷರ ಆಯ್ಕೆ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.