ಹರಿಯಾಣದಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಬಿಜೆಪಿಯ ಸಂಭ್ರಮದಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು
ಪಿಟಿಐ ಚಿತ್ರ
ಚಂಡೀಗಢ: ಹರಿಯಾಣ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ 10ರಲ್ಲಿ 9 ಕಡೆ ಬಿಜೆಪಿ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ.
ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿತು. 2024ರ ವಿಧಾನಸಭಾ ಚುನಾವಣೆಯ ಸೋಲಿನ ನಂತರ ನಗರಸಭೆಯಲ್ಲಿ ತನ್ನ ಹಿಡಿತ ಸಾಧಿಸಲು ಯತ್ನಿಸಿದ ಕಾಂಗ್ರೆಸ್‌ನ ಪ್ರಯತ್ನ ವಿಫಲವಾಗಿದೆ.
ಸೋನಿಪತ್ ಕ್ಷೇತ್ರದಲ್ಲಿ ಮೇಯರ್ ಸ್ಥಾನ ಸಹಿತ ಹಿಡಿತ ಹೊಂದಿದ್ದರೂ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಭಿಗಿ ಹಿಡಿತದ ಕ್ಷೇತ್ರವೆಂದೇ ಗುರುತಿಸಲಾಗಿದ್ದರೂ ಚುನಾವಣೆಯಲ್ಲಿ ಅದನ್ನು ಸಾಬೀತುಪಡಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಇಂದ್ರಜೀತ್ ಯಾದವ್ ಎಂಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಬಿಜೆಪಿಯೇತರ ಅಭ್ಯರ್ಥಿ ಇವರೊಬ್ಬರೇ ಆಗಿದ್ದಾರೆ.
ಹೋಳಿ ಹಬ್ಬದ ಸಂದರ್ಭದಲ್ಲೇ ಫಲಿತಾಂಶ ಪ್ರಕಟವಾಗಿದ್ದರಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮ ಇಮ್ಮಡಿಗೊಂಡಿತ್ತು. ಎಲ್ಲೆಡೆ ಪರಸ್ಪರ ಗುಲಾಲು ಹಚ್ಚಿ, ಸಿಹಿ ಹಂಚಿ ಪಕ್ಷದ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು.
ಈ ಗೆಲುವಿಗೆ ಪ್ರತಿಕ್ರಿಯಿಸಿರುವ ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ‘ಬಿಜೆಪಿ ಸರ್ಕಾರದ ನೀತಿ ಮತ್ತು ಕಾರ್ಯಗಳ ಮೇಲೆ ನಂಬಿಕೆ ಇಟ್ಟ ಮತದಾರರು ರಾಜ್ಯದಲ್ಲಿ ‘ತ್ರಿಬಲ್ ಎಂಜಿನ್’ ಸರ್ಕಾರಕ್ಕೆ ತಮ್ಮ ಮೊಹರು ಒತ್ತಿದ್ದಾರೆ. ಇದರಿಂದ ಅಭಿವೃದ್ಧಿ ಹೊಂದಿದ ಹರಿಯಾಣ ಮತ್ತು ಭಾರತದ ಕನಸು ನನಸಾಗಲು ಇನ್ನಷ್ಟು ವೇಗ ಸಿಗಲಿದೆ’ ಎಂದಿದ್ದಾರೆ.
ಗುರುಗ್ರಾಮ, ಮನೇಸಾರ್, ಫರೀದಾಬಾದ್, ಹಿಸಾರ್, ರೋಹಟಕ್, ಕರ್ನಲ್ ಮತ್ತು ಯಮುನಾನಗರದಲ್ಲಿ ಮಾರ್ಚ್ 2ರಂದು ಚುನಾವಣೆ ನಡೆದಿತ್ತು. ಅಂಬಾಲ ಮತ್ತು ಸೋನಿಪತ್‌ನಲ್ಲಿ ಉಪಚುನಾವಣೆ ನಡೆದಿತ್ತು. 21 ನಗರಸಭೆಗಳಿಗೂ ಅದೇ ದಿನ ಚುನಾವಣೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.