ADVERTISEMENT

8 ವರ್ಷಗಳ ಸಂಭ್ರಮ: ಬಿಜೆಪಿ ಬೃಹತ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಮೇ 2022, 20:47 IST
Last Updated 11 ಮೇ 2022, 20:47 IST
   

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಾಗುತ್ತಿದ್ದು, ಈ ಸಂಭ್ರಮವನ್ನು 15 ದಿನಗಳ ಅಭಿಯಾನದ ರೂಪದಲ್ಲಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಎಂಟು ವರ್ಷಗಳ ಅವಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದುಕೊಂಡ ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲ ಫಲಾನುಭವಿಗಳ ಬಗ್ಗೆ ಬೆಳಕು ಚೆಲ್ಲುವಂತೆ ಪಕ್ಷದ ಹಿರಿಯ ಮುಖಂಡರಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದಾರೆ.

ಇದೇ 30ರಿಂದ ಆರಂಭವಾಗಲಿರುವ ಈ ಅಭಿಯಾನವನ್ನು ನಡ್ಡಾ ಅವರು ಉದ್ಘಾಟಿಸಲಿದ್ದು, ಬಿಜೆಪಿ ಸಾಧನೆಗಳ ಪಟ್ಟಿಯನ್ನು ಅವರು ಅಂದು ಬಿಡುಗಡೆ ಮಾಡಲಿದ್ದಾರೆ.

ಸಂಭ್ರಮಾಚರಣೆಯ ಸ್ವರೂಪ ಹೇಗಿರಬೇಕು ಎಂದು ಶಿಫಾರಸು ಮಾಡಲು 10 ಸದಸ್ಯರ ಸಮಿತಿಯನ್ನು ನಡ್ಡಾ ಕಳೆದ ತಿಂಗಳು ರಚಿಸಿದ್ದರು. ಈ ಸಮಿತಿಯು ಮೇ 5ರಂದು ವರದಿ ಸಲ್ಲಿಸಿತ್ತು.

ADVERTISEMENT

ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಲು ಚಿಂತಕರ ಗುಂಪಿನೊಡನೆ ಸಭೆಗಳನ್ನು ನಡೆಸಬೇಕು. ಗರೀಬ್ ಕಲ್ಯಾಣ್, ಆತ್ಮನಿರ್ಭರ ಹಾಗೂ ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳನ್ನು ಮುಖ್ಯವಾಗಿ ಪ್ರಸ್ತಾಪಿಸಬೇಕು ಎಂದು ಸಂಸದರು ಹಾಗೂ ಶಾಸಕರಿಗೆ ನಡ್ಡಾ ಸೂಚಿಸಿದ್ದಾರೆ. ಜೊತೆಗೆ, ವಿವಿಧ ಸಾಮಾಜಿಕ ಸಂಘಟನೆಗಳು, ರೈತ ಸಂಘಟನೆಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳನ್ನು ಸಂಪರ್ಕಿಸುವಂತೆ ಅವರು ಸೂಚಿಸಿದ್ದಾರೆ.ಬೈಕ್ ಜಾಥಾ, ಸೈಕಲ್ ಜಾಥಾ ಮೊದಲಾದ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗಗಳನ್ನು ತಲುಪುವ ಯತ್ನ ಆಗಬೇಕು ಎಂದಿದ್ದಾರೆ.

ಮೋದಿ ಅವರ ಕೆಲಸಗಳು, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಂದಿರುವ ವರ್ಚಸ್ಸು, ಕೋವಿಡ್ ನಿರ್ವಹಣೆ, 370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದತಿ ಮೊದಲಾದ ವಿಚಾರಗಳನ್ನು ಜನರಿಗೆ ತಲುಪಿಸಬೇಕು ಎಂಬ ಸೂಚನೆ ಬಂದಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಮೋದಿ ಅವರು ಅಧಿಕಾರ ವಹಿಸಿಕೊಂಡ 2014ರ ಮೇ 24ರ ಸ್ಮರಣೆಗಾಗಿ ದೇಶದಾದ್ಯಂತ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.