ADVERTISEMENT

ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

ಪಿಟಿಐ
Published 16 ಜನವರಿ 2026, 10:32 IST
Last Updated 16 ಜನವರಿ 2026, 10:32 IST
   

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ಇಂದು (ಶುಕ್ರವಾರ) ಘೋಷಿಸಲಾಗಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜ.20ರಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.

ಬೇರೆ ಯಾವುದೇ ನಾಯಕರು ನಾಮಪತ್ರ ಸಲ್ಲಿಸುವ ಸಾಧ್ಯತೆ ಕಡಿಮೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರೇ ಅವಿರೋಧವಾಗಿ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‌ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಜನವರಿ 19ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಾಮಪತ್ರ ಸಲ್ಲಿಸಬಹುದು ಮತ್ತು ಅದೇ ದಿನ ಸಂಜೆ 5 ರಿಂದ 6 ರವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು ಎಂದು ಪಕ್ಷದ ಚುನಾವಣಾ ಉಸ್ತುವಾರಿ ಕೆ. ಲಕ್ಷ್ಮಣ್ ಅವರು ಬಿಡುಗಡೆ ಮಾಡಿದ ಚುನಾವಣಾ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ।

ADVERTISEMENT

ಜನವರಿ 19 ರಂದು ಸಂಜೆ 4 ರಿಂದ 5ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಗತ್ಯವಿದ್ದರೆ ಜನವರಿ 20ರಂದು ಮತದಾನ ನಡೆಯಲಿದೆ. ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಅದೇ ದಿನ ಅಧಿಕೃತವಾಗಿ ಘೋಷಿಸಲಾಗುವುದು ಎಂದೂ ಲಕ್ಷ್ಮಣ್ ಹೇಳಿದ್ದಾರೆ.

ನಡ್ಡಾ ಅವರನ್ನು 2019ರ ಜೂನ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಳಿಕ ಅವಿರೋಧವಾಗಿ 2020ರ ಜನವರಿ 20ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

ಯಾರು ಈ ನಿತಿನ್ ನಬಿನ್

ಬಿಜೆಪಿಯ ಹಿರಿಯ ನಾಯಕ, ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರನಾಗಿರುವ ನಬಿನ್‌ ಅವರು 2 ಬಾರಿ ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಎರಡು ದಶಕಕ್ಕೂ ಅಧಿಕ ಸಂಘಟನಾ ಅನುಭವವಿದೆ. ಬಿಹಾರ ಬಿಜೆ‍ಪಿ ಯುವಘಟಕದಿಂದ ಚುನಾವಣಾ ಜವಾಬ್ದಾರಿಗಳನ್ನು ವಹಿಸಿಕೊಳ್ಳುವವರೆಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಪಟ್ನಾದ ಬಂಕಿಮಪುರ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು, 2008ರಲ್ಲಿ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. 2010–2016ರವರೆಗೆ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. 2016ರಿಂದ 2019ರವರೆಗೆ ಬಿಹಾರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. ಈವರೆಗೆ ರಸ್ತೆ ನಿರ್ಮಾಣ, ನಗರಾಭಿವೃದ್ಧಿ, ವಸತಿ, ಕಾನೂನು ಹಾಗೂ ನ್ಯಾಯ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ.

12ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ನಬೀನ್, 26 ವರ್ಷವಿದ್ದಾಗಲೇ ಚುನಾವಣಾ ಕಣಕ್ಕೆ ಧುಮುಕಿದ್ದರು. 2006ರಲ್ಲಿ ತಂದೆ ಸಿನ್ಹಾ ಅವರ ನಿಧನದಿಂದ ತೆರವಾದ ಪಟ್ನಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕಿಳಿದಿದ್ದರು. ಈ ಕ್ಷೇತ್ರದಿಂದ ಸಿನ್ಹಾ ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.