ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹ: ಟಿಎಂಸಿ ಟೀಕೆ

ಪಿಟಿಐ
Published 16 ಜೂನ್ 2020, 5:49 IST
Last Updated 16 ಜೂನ್ 2020, 5:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ: ಮುಂಬರುವ 2021ರ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಉಂಟು ಮಾಡಬಲ್ಲ ನಿರ್ಧಾರವೊಂದನ್ನು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಕೈಗೊಂಡಿದೆ. ಲಾಕ್ಡೌನ್ ಸಮಯದಲ್ಲಿ ರಾಜ್ಯಕ್ಕೆ ಮರಳಿದ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಮುಂದಾಗಿರುವ ಬಿಜೆಪಿ, ಆ ಮೂಲಕ ಅವರ ಜೀವನೋಪಾಯಕ್ಕೆ ನೆರವಾಗುವ ಯೋಜನೆ ಹಾಕಿಕೊಂಡಿದೆ.

ಬಿಜೆಪಿಯ ಈ ಯೋಜನೆಗೆ ಆಡಳಿತಾರೂಢ ಟಿಎಂಸಿ ಕಿಡಿ ಕಾರಿದೆ. ಇದು ರಾಜಕೀಯ ಪ್ರೇರಿತ ಎಂದಿದೆ. ಅಲ್ಲದೆ, ವಲಸೆ ಕಾರ್ಮಿಕರ ಬಿಕ್ಕಟ್ಟು "ಯೋಜನಾಬದ್ಧವಲ್ಲದ" ಲಾಕ್‌ಡೌನ್‌ನ ಪರಿಣಾಮಗಳು ಎಂದು ಆರೋಪಿಸಿದೆ.

ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ದಿಲೀಪ್ ಘೋಷ್, ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರು ಈ ತಿಂಗಳಿನಿಂದ ಪ್ರತಿ ಬ್ಲಾಕ್‌ಗೆ ತೆರಳಿ ವಿವಿಧ ರಾಜ್ಯಗಳಿಂದ ಮರಳಿರುವ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ವಲಸೆ ಕಾರ್ಮಿಕರ ಶೈಕ್ಷಣಿಕ ಹಿನ್ನೆಲೆ, ಕೆಲಸ ಮಾಡುತ್ತಿದ್ದ ಕ್ಷೇತ್ರ, ಕೌಶಲ ಮತ್ತು ಕೊನೆಯದಾಗಿ ಪಡೆದ ವೇತನದ ವಿವರವನ್ನು ಸಂಗ್ರಹಿಸಿಕೊಳ್ಳಲಿದ್ದಾರೆ,’ ಎಂದು ತಿಳಿಸಿದ್ದಾರೆ.

ADVERTISEMENT

ಉದ್ಯೋಗ ಹುಡುಕಲು ಅಥವಾ ಸ್ವಂತ ಉದ್ಯಮ ಆರಂಭಿಸಲು ಸಾಲ ಒದಗಿಸಲು, ಕೆಲಸದ ಸ್ಥಳಗಳಿಗೆ ಮತ್ತೆ ತೆರಳಲು ನಿರ್ಧರಿಸಿದವರಿಗೆ ಸಹಾಯ ಮಾಡಲು ಪಕ್ಷವು ಕೇಂದ್ರದೊಂದಿಗೆ ಸಮನ್ವಯ ಸಾಧಿಸಲಿದೆ ಎಂದೂ ಅವರು ತಿಳಿಸಿದ್ದಾರೆ.

ಬಿಜೆಪಿಯ ಈ ಯೋಜನೆಗೆ ಮೂಲ ಕಾರಣ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ದಿಲೀಪ್‌ ಘೋಷ್‌, ‘ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಪಶ್ಚಿಮ ಬಂಗಾಳದ ಲಕ್ಷಾಂತರ ವಲಸೆ ಕಾರ್ಮಿಕರ ಬಗ್ಗೆ ರಾಜ್ಯಕ್ಕೆ ಯಾವುದೇ ಮಾಹಿತಿಯೇ ಇಲ್ಲ. ಆದ್ದರಿಂದ ಬಿಜೆಪಿ ಈ ಕೆಲಸಕ್ಕೆ ಮುಂದಾಗಿದೆ,’ ಎಂದು ಹೇಳಿದ್ದಾರೆ.

‘ಪಶ್ಚಿಮ ಬಂಗಾಳ ಸರ್ಕಾರ ಅವರಿಗೆ ಉದ್ಯೋಗ ಮತ್ತು ಇತರ ಯಾವುದೇ ರೀತಿಯ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿದೆ. ಲಾಕ್‌ಡೌನ್ ತೆರವುಗೊಳಿಸಿದರೆ ಅವರಲ್ಲಿ ಹಲವರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಮತ್ತೆ ಹೋಗುತ್ತಾರೆ. ಆದರೆ ಹಲವರು ಇಲ್ಲೇ ಉಳಿಯಲಿದ್ದಾರೆ. ಅವರು ಏನು ಮಾಡಬೇಕು? ಆದ್ದರಿಂದ ನಾವು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ’ ಎಂದು ಘೋಷ್‌ ಹೇಳಿದರು.

ಬಿಜೆಪಿಯ ಈ ಯೋಜನೆಯನ್ನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ತೀವ್ರವಾಗಿ ಟೀಕಿಸಿದ್ದಾರೆ. "ಬಿಜೆಪಿಯಿಂದಾಗಿ ಈ ವಲಸೆ ಕಾರ್ಮಿಕರ ಬಿಕ್ಕಟ್ಟು ಸಂಭವಿಸಿದೆ. ಈಗ ಅವರು ಹಾಕಿಕೊಂಡಿರುವ ಯೋಜನೆಯು ಮೊಸಳೆ ಕಣ್ಣೀರು ಸುರಿಸುವಂಥದ್ದು ಮತ್ತು ವಿಧಾನಸಭೆ ಚುನಾವಣೆಗೂ ಮೊದಲು ತಪ್ಪುಗಳನ್ನು ಮರೆಮಾಚುವಂಥದ್ದು,’ ಎಂದು ಚಟರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.