ADVERTISEMENT

ಗೋವಾ ಚುನಾವಣೆ: ಶಾಸಕರನ್ನು ಕುರಿಗಳಂತೆ ಖರೀದಿಸಿದ್ದ ಬಿಜೆಪಿ- ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:45 IST
Last Updated 28 ಜನವರಿ 2022, 19:45 IST
   

ಪ‍ಣಜಿ: ಗೋವಾದಲ್ಲಿ ಬಿಜೆಪಿಯು ಶಾಸಕರನ್ನು ಕುರಿ ಮತ್ತು ಮೇಕೆಗಳಂತೆ ಖರೀದಿ ಮಾಡಿತ್ತು ಎಂದು ಕರ್ನಾಟಕ ಕಾಂ‌ಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶುಕ್ರವಾರ ಆರೋಪಿಸಿದ್ದಾರೆ. ಒಬ್ಬೊಬ್ಬ ಶಾಸಕನನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ₹30 ಕೋಟಿ ಆಮಿಷ ಒಡ್ಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪಕ್ಷಾಂತರ ಮಾಡಿರುವ 13 ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳದಿರುವ ನೀತಿಯನ್ನು ಕಾಂಗ್ರೆಸ್‌ ಅನುಸರಿಸಿದೆ ಎಂದು ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಶಿವಕುಮಾರ್‌ ಹೇಳಿದರು.

‘ಬಿಜೆಪಿ ಹಣ ಬಲ ಬಳಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ₹30 ಕೋಟಿಯಿಂದ ₹40 ಕೋಟಿ ವೆಚ್ಚ ಮಾಡಿದೆ. ಭಾರಿ ಮೊತ್ತ ನೀಡುವ ಭರವಸೆ ಕೊಡಲಾಗಿದೆ, ಮುಂಗಡವನ್ನೂ ನೀಡಲಾಗಿದೆ ಎಂದು ಕೆಲವು ಶಾಸಕರು ಸದನದಲ್ಲಿಯೇ ಹೇಳಿದ್ದರು. ಶಾಸಕರನ್ನು ಕುರಿ–ಮೇಕೆಗಳ ರೀತಿಯಲ್ಲಿ ಖರೀದಿ ಮಾಡಲಾಗಿದೆ. ಪ್ರಜಾಪ್ರಭುತ್ವ ಎಲ್ಲಿ ಹೋಯಿತು? ಪ್ರಜಾಪ್ರಭುತ್ವವು ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪಕ್ಷ ಬಿಟ್ಟ 13 ಶಾಸಕರಲ್ಲಿ ಹಲವರು ಮರಳಿ ಪಕ್ಷ ಸೇರುವುದಕ್ಕಾಗಿ ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದರು.

‘ಬಿಜೆಪಿ ಆಪರೇಷನ್‌ ಕಮಲ ನಡೆಸಿತು. ಪಕ್ಷಾಂತರಿಗಳು ಮರಳಿ ಬರಬಾರದು ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ. 13 ಶಾಸಕರ ಪೈಕಿ 10 ಮಂದಿ ವಾಪಸ್‌ ಬರಲು ಸಿದ್ಧರಿದ್ದಾರೆ. ಅವರು ನನ್ನನ್ನು ಭೇಟಿಯಾಗಿದ್ದಾರೆ. ಕೆಲವರು ದೆಹಲಿಯಲ್ಲಿ ಭೇಟಿಯಾಗಿದ್ದರು. ನಾವು ಒಪ್ಪಿಲ್ಲ’ ಎಂದು ಶಿವಕುಮಾರ್‌ ತಿಳಿಸಿದ್ದಾರೆ.

‘ನಾವು ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಪಕ್ಷ ಬಿಡುವುದಿಲ್ಲ ಎಂದು ಅವರು ಪ್ರತಿಜ್ಞೆಯನ್ನೂ ಮಾಡಿದ್ಧಾರೆ’ ಎಂದು ಅವರು ಹೇಳಿದ್ದಾರೆ.

ಗೋವಾ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಚೋಡಣ್‌ಕರ್‌ ಪ್ರಕಾರ, ಪಕ್ಷವು 36–37 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಕಾಂಗ್ರೆಸ್‌ ಅಭ್ಯರ್ಥಿಗಳ ಸರಾಸರಿ ವಯಸ್ಸು 48 ಮೀರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.