ADVERTISEMENT

ಪಾಕ್ ಪತ್ರಕರ್ತನ ಜತೆ ಅನ್ಸಾರಿಗೆ ನಂಟು ಆರೋಪ: ಬಿಜೆಪಿಯಿಂದ ಫೋಟೊ ಬಿಡುಗಡೆ

ಪಿಟಿಐ
Published 15 ಜುಲೈ 2022, 11:48 IST
Last Updated 15 ಜುಲೈ 2022, 11:48 IST
ಗೌರವ್ ಭಾಟಿಯಾ ಅವರು ಫೋಟೊ ಬಿಡುಗಡೆ ಮಾಡಿರುವುದು (ಚಿತ್ರ ಕೃಪೆ – ಬಿಜೆಪಿ ಟ್ವೀಟ್)
ಗೌರವ್ ಭಾಟಿಯಾ ಅವರು ಫೋಟೊ ಬಿಡುಗಡೆ ಮಾಡಿರುವುದು (ಚಿತ್ರ ಕೃಪೆ – ಬಿಜೆಪಿ ಟ್ವೀಟ್)   

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪಾಕಿಸ್ತಾನದ ಐಎಸ್ಐ ಪರ ಗೂಢಚಾರಿಕೆ ನಡೆಸಿರುವ ಅಲ್ಲಿನ ಪತ್ರಕರ್ತರನ್ನು ಭಾರತಕ್ಕೆ ಕರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಇದೀಗ ಆ ಬಗ್ಗೆ ಫೋಟೊ ಬಿಡುಗಡೆ ಮಾಡಿದೆ.

‘ಭಯೋತ್ಪಾದನೆ ವಿಷಯವಾಗಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಮಾವೇಶದ ಚಿತ್ರದಲ್ಲಿ ಹಮೀದ್ ಅನ್ಸಾರಿ ಅವರು ಮಧ್ಯದಲ್ಲಿ ಕುಳಿತಿದ್ದು, ಅದೇ ವೇದಿಕೆಯಲ್ಲಿ ಪಾಕಿಸ್ತಾನದ ಪತ್ರಕರ್ತ, ಪಾಕಿಸ್ತಾನದ ಏಜೆಂಟ್ ನುಸ್ರತ್ ಮಿರ್ಜಾ ಕೂಡ ಕುಳಿತಿದ್ದಾರೆ’ ಎಂದು ಪಕ್ಷದ ವಕ್ತಾರ ಗೌರವ್ ಭಾಟಿಯಾ ಅವರು ಫೋಟೊ ಬಿಡುಗಡೆ ಮಾಡಿರುವುದನ್ನು ಬಿಜೆಪಿ ಟ್ವೀಟ್ ಮಾಡಿದೆ.

‘ಯುಪಿಎ ಆಡಳಿತದ ಅವಧಿಯಲ್ಲಿ ಭಾರತಕ್ಕೆ ಐದು ಬಾರಿ ಭೇಟಿ ನೀಡಿದ್ದೆ. ಇಲ್ಲಿ ಸಂಗ್ರಹಿಸಿದ್ದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೆ ಎಂದು ಐಎಸ್ಐ ಪರ ಗೂಢಚಾರರಾಗಿದ್ದ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿದ್ದರು ಎಂದು ಬಿಜೆಪಿ ಇತ್ತೀಚೆಗೆ ಆರೋಪಿಸಿತ್ತು. ಅನ್ಸಾರಿ ಅವರ ಆಹ್ವಾನದ ಮೇರೆಗೆ ಮಿರ್ಜಾ ಭಾರತಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ ಅನ್ಸಾರಿ ಅವರನ್ನೂ ಭೇಟಿ ಮಾಡಿದ್ದರು ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದರು.

ADVERTISEMENT

ಆದರೆ, ಆರೋಪವನ್ನು ತಳ್ಳಿ ಹಾಕಿದ್ದ ಅನ್ಸಾರಿ, ‘ಭಾರತದ ಉಪರಾಷ್ಟ್ರಪತಿಯಿಂದ ವಿದೇಶಿ ಗಣ್ಯರಿಗೆ ಸಾಮನ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸರ್ಕಾರದ ಸಲಹೆಯ ಮೇರೆಗೆ ಆಹ್ವಾನಗಳು ಹೋಗುತ್ತಿರುತ್ತವೆ. 2010ರ ಡಿಸೆಂಬರ್ 11ರಂದು ನಾನು ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿದ್ದೆ. ಸಾಮಾನ್ಯವಾಗಿ ಅಲ್ಲಿಗೆ ಆಹ್ವಾನಿತರನ್ನು ಆಯೋಜಕರೇ ಕರೆಸಿರುತ್ತಾರೆ. ನಾನು ಯಾವತ್ತೂ ಮಿರ್ಜಾ ಅವರನ್ನು ಆಹ್ವಾನಿಸಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.