ADVERTISEMENT

ನಾನು ಮನೆಯೊಳಗಿರಬೇಕೆಂದು ಬಯಸಿದ್ದ ಬಿಜೆಪಿ: ಮಮತಾ ಬ್ಯಾನರ್ಜಿ ಆರೋಪ

ಪಿಟಿಐ
Published 17 ಮಾರ್ಚ್ 2021, 10:33 IST
Last Updated 17 ಮಾರ್ಚ್ 2021, 10:33 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಗೊಪಿಬಲ್ಲಾವ್‌ಪುರ(ಪಶ್ಚಿಮ ಬಂಗಾಳ): ‘ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಾನು ಮನೆಯೊಳಗೆ ಇರಬೇಕೆಂದು ಬಿಜೆಪಿಯವರು ಬಯಸಿದ್ದರು‘ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದರು.

ಜಾಗ್ರಾಮ್ ಜಿಲ್ಲೆಯ ಗೋಪಿಬ್ಲ್ಲವ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಮತಾ, ‘ಈ ಹಿಂದೆ ಸಿಪಿಎಂ ಪಕ್ಷದವರೂ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು. ಈಗ ಬಿಜೆಪಿ ಕೂಡ ಅದೇ ರೀತಿ ಮಾಡುತ್ತಿದೆ‘ ಎಂದು ಆರೋಪಿಸಿದರು.

ಗಾಲಿ ಕುರ್ಚಿಯಲ್ಲೇ ಕುಳಿತು ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ನಾನು ಚುನಾವಣೆ ವೇಳೆ ಹೊರಗೆ ಹೋಗದೇ, ಮನೆಯೊಳಗೆ ಕುಳಿತಿರಬೇಕೆಂದು ಬಿಜೆಪಿಯವರು ಬಯಸಿದ್ದರು. ಅದೇ ಕಾರಣಕ್ಕೆ ನನ್ನ ಎಡಗಾಲಿಗೆ ಗಾಯ ಮಾಡಿದ್ದಾರೆ‘ ಎಂದು ಆರೋಪಿಸಿದರು.

ADVERTISEMENT

ಸ್ಥಳೀಯ ಟಿಎಂಸಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದ ಮಮತಾ ಬ್ಯಾನರ್ಜಿಯವರು ‘ಬಿಜೆಪಿಯವರು ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಾವು ಆ ಪಕ್ಷವನ್ನು ಸೋಲಿಸುತ್ತೇವೆ‘ ಎಂದು ಹೇಳಿದರು. ‘ನೀವು ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿದರೆ, ನನಗೆ ನೀಡಿದಂತೆ‘ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.