ADVERTISEMENT

ಲೆ. ಗವರ್ನರ್ ಮೂಲಕ ದೆಹಲಿಯಲ್ಲಿ ಆಡಳಿತ ನಡೆಸಲು ಬಿಜೆಪಿ ಯತ್ನ: ಖರ್ಗೆ

ಏಜೆನ್ಸೀಸ್
Published 25 ಮಾರ್ಚ್ 2021, 13:45 IST
Last Updated 25 ಮಾರ್ಚ್ 2021, 13:45 IST
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಆಡಳಿತ ನಡೆಸಲು ಪ್ರಯತ್ನಿಸುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನೇತಾರ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

'ರಾಷ್ಟ್ರ ರಾಜಧಾನಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಸರ್ಕಾರವನ್ನು ನಡೆಸಲು ಬಿಜೆಪಿ ಬಯಸುತ್ತಿದೆ. ಅದಕ್ಕಾಗಿಯೇ ಸಂಸತ್ತಿನ ಮೂಲಕ ಜಿಎನ್‌ಸಿಟಿಡಿ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಹಾಗಿದ್ದರೆ ಚುನಾಯಿತ ಸರ್ಕಾರದ ಅವಶ್ಯಕತೆ ಏನು?' ಎಂದವರು ಪ್ರಶ್ನಿಸಿದ್ದಾರೆ.

'ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿದಾಗ ನಾವು ವಿಧೇಯಕವನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ಬಿಜೆಪಿಯನ್ನು ಒತ್ತಾಯಿಸಿದೆವು. ಆದರೆ ಅದಕ್ಕೆ ಬಿಜೆಪಿಯವರು ಒಪ್ಪಲಿಲ್ಲ. ಅದಕ್ಕಾಗಿಯೇ ವಿಪಕ್ಷಗಳು ಸದನದಿಂದ ಹೊರನಡೆದವು' ಎಂದು ಖರ್ಗೆ ವಿವರಿಸಿದ್ದಾರೆ.

ADVERTISEMENT

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ 2021 ದೆಹಲಿ ಸರಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಗಿದೆ. ಈ ಮಸೂದೆಯು ದೆಹಲಿಯ ಚುನಾಯಿತ ಸರ್ಕಾರಕ್ಕಿಂತ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡಲಿದೆ.

ದೆಹಲಿ ಶಾಸಕಾಂಗವು ಅಂಗೀಕರಿಸುವ ಯಾವುದೇ ಬಿಲ್‌ನಲ್ಲಿ 'ಸರ್ಕಾರ' ಎಂಬ ಪದವು 'ಲೆಫ್ಟಿನೆಂಟ್ ಗವರ್ನರ್' ಎಂಬುದನ್ನು ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.