ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿಗಳ ನೆಲಸಮ: ಕೇಜ್ರಿವಾಲ್ ಆರೋ‍ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 7:58 IST
Last Updated 12 ಜನವರಿ 2025, 7:58 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯ ಎಲ್ಲಾ ಕೊಳೆಗೇರಿ ಪ್ರದೇಶಗಳನ್ನು ನೆಲಸಮ ಮಾಡುತ್ತದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.

ಇಲ್ಲಿನ ಶಕುರ್ ಬಸ್ತಿ ಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸ್ಲಂ ನಿವಾಸಿಗಳ ಕಲ್ಯಾಣಕ್ಕಿಂತ ಭೂಸ್ವಾಧೀನಕ್ಕೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

'ಮೊದಲು ನಿಮ್ಮ ಮತಗಳು ಅವರಿಗೆ (ಬಿಜೆಪಿ) ಅಗತ್ಯವಾಗಿರುತ್ತದೆ. ಬಳಿಕ ನಿಮ್ಮ ಕೊಳೆಗೇರಿ ಪ್ರದೇಶಗಳನ್ನು ನೆಲಸಮ ಮಾಡುತ್ತಾರೆ. ಕಳೆದ ಐದು ವರ್ಷಗಳಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ 4,700 ಮನೆಗಳನ್ನು ಮಾತ್ರ ಕೇಂದ್ರ ಸರ್ಕಾರ ನಿರ್ಮಿಸಿದೆ' ಎಂದು ಹೇಳಿದ್ದಾರೆ.

'ಅಲ್ಲಿ ವಾಸಿಸುವ ಜನರ ಬಗ್ಗೆ ಬಿಜೆಪಿಯವರು ಯಾವುದೇ ಕಾಳಜಿ ಹೊಂದಿಲ್ಲ. ಕೇಲವ ಚುನಾವಣೆಗಾಗಿ ಭರವಸೆಗಳನ್ನು ನೀಡುತ್ತಾರೆ. ಬಳಿಕ ಎಲ್ಲಾ ಕೊಳೆಗೇರಿ ಪ್ರದೇಶಗಳನ್ನು ನೆಲಸಮ ಮಾಡುತ್ತಾರೆ' ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಕೇಜ್ರಿವಾಲ್ ಅವರೊಂದಿಗೆ ಪಕ್ಷದ ಹಿರಿಯ ಎಎಪಿ ನಾಯಕ ಹಾಗೂ ಶಕುರ್ ಬಸ್ತಿ ಕ್ಷೇತ್ರದ ಅಭ್ಯರ್ಥಿ ಸತ್ಯೇಂದ್ರ ಜೈನ್ ಜತೆಗಿದ್ದರು. 2013, 2015 ಮತ್ತು 2020 ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿರುವ ಜೈನ್‌ 4ನೇ ಬಾರಿಗೆ ಸ್ಪರ್ಧಿಸಿದ್ದಾರೆ.

70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.