ADVERTISEMENT

ಹರಿಯಾಣದಲ್ಲಿ ಸತತ 3ನೇ ಸಲ ಅಧಿಕಾರಕ್ಕೇರಲಿದೆ ಬಿಜೆಪಿ: ಮುಖ್ಯಮಂತ್ರಿ ಸೈನಿ ಭರವಸೆ

ಪಿಟಿಐ
Published 17 ಆಗಸ್ಟ್ 2024, 13:44 IST
Last Updated 17 ಆಗಸ್ಟ್ 2024, 13:44 IST
<div class="paragraphs"><p>ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ</p></div>

ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ

   

ಪಿಟಿಐ

ಚಂಡೀಗಢ: ವಿಧಾನಸಭೆ ಚುನಾವಣೆಗೆ ಬಿಜೆಪಿ ಸಂಪೂರ್ಣ ಸಜ್ಜಾಗಿದ್ದು, ಭಾರಿ ಬಹುಮತದೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೈನಿ, ಚುನಾವಣಾ ಆಯೋಗದ ಘೋಷಣೆಯನ್ನು ಸ್ವಾಗತಿಸಿದ್ದಾರೆ.

'ಚುನಾವಣೆಗೆ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ಬಿಜೆಪಿಯು ಹರಿಯಾಣದಲ್ಲಿ ಭಾರಿ ಬಹುಮತದೊಂದಿಗೆ ಸತತ ಮೂರನೇ ಸಲ ಸರ್ಕಾರ ರಚಿಸಲಿದೆ' ಎಂದು ಹೇಳಿದ್ದಾರೆ.‌

ಬಿಜೆಪಿ ಸರ್ಕಾರವು ಯಾವುದೇ ತಾರತಮ್ಯ ತೋರದೆ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಪ್ರತಿಪಾದಿಸಿರುವ ಅವರು, ಕಳೆದ 10 ವರ್ಷಗಳಲ್ಲಿ ಹರಿಯಾಣವು ಪ್ರತಿ ಕ್ಷೇತ್ರದಲ್ಲಿಯೂ ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಿದೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧ ಗುಡುಗಿದ ಮುಖ್ಯಮಂತ್ರಿ, ಆ ಪಕ್ಷವು ಸುಳ್ಳು ಹೇಳುವುದನ್ನು ಬಿಟ್ಟು ಏನು ಮಾಡಿದೆ ಎಂಬ ವಿವರವನ್ನು ಜನರ ಮುಂದಿಡಲಿ ಎಂದು ಸವಾಲೆಸೆದಿದ್ದಾರೆ.

ಕಾಂಗ್ರೆಸ್‌ನ ಸುಳ್ಳುಗಳಿಗೆ ತಕ್ಕ ಪಾಠ ಕಲಿಸುವಂತೆ ಜನರನ್ನು ಕೋರಿರುವ ಅವರು, ಭಾರಿ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆಯೂ ಮನವಿ ಮಾಡಿದ್ದಾರೆ.

'ವಿನೇಶ್ ಹರಿಯಾಣದ ಮಗಳು'
ಇದೇ ವೇಳೆ ಕುಸ್ತಿಪಟು ವಿನೇಶ್‌ ಫೋಗಟ್‌ ಕುರಿತು ಕೇಳಿದ ಪ್ರಶ್ನೆಗೂ ಸೈನಿ ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಆಗಮಿಸಿರುವ ಫೋಗಟ್‌ಗೆ ಸ್ವಾಗತ ಕೋರಿದ ಅವರು, 'ವಿನೇಶ್‌ ಫೋಗಟ್‌ ಹರಿಯಾಣದ ಮಗಳು. ಅವರ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ' ಎಂದೂ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್‌ನಿಂದ ಅನರ್ಹಗೊಂಡು ಆಘಾತ ಅನುಭವಿಸಿದ್ದ ಫೋಗಟ್‌ ಅವರು ಇಂದು (ಶನಿವಾರ) ಭಾರತಕ್ಕೆ ಮರಳಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ನೂರಾರು ಅಭಿಮಾನಿಗಳು ನೋಟು ಹಾಗೂ ಹೂವಿನ ಹಾರ ಹಾಕಿ, ಬೆಂಬಲದ ಘೋಷಣೆಗಳೊಂದಿಗೆ ಸ್ವಾಗತಿಸಿದ್ದಾರೆ.

ಹರಿಯಾಣದ ಬಲಾಲಿ ಗ್ರಾಮದ ಫೋಗಟ್‌ ಅವರು ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಫೈನಲ್‌ ಸೆಣಸಾಟದಿಂದ ಹೊರಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.