ADVERTISEMENT

ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆ: 334ರ ಪೈಕಿ 112ರಲ್ಲಿ ಬಿಜೆಪಿ ಅವಿರೋಧ ಆಯ್ಕೆ

ಪಿಟಿಐ
Published 10 ನವೆಂಬರ್ 2021, 4:53 IST
Last Updated 10 ನವೆಂಬರ್ 2021, 4:53 IST
ಬಿಜೆಪಿ ಬೆಂಬಲಿಗರ ಸಂಭ್ರಮ
ಬಿಜೆಪಿ ಬೆಂಬಲಿಗರ ಸಂಭ್ರಮ    

ಅಗರ್ತಲ: ತ್ರಿಪುರ ನಗರ ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಒಟ್ಟು 334 ಸ್ಥಾನಗಳ ಪೈಕಿ 112 ಸ್ಥಾನಗಳಲ್ಲಿ ಅವಿರೋಧ ಆಯ್ಕೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ನವೆಂಬರ್ 5 ರಂದು ನಾಮಪತ್ರಗಳ ಪರಿಶೀಲನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಗಡಿ ರಾಜ್ಯವಾದ ತ್ರಿಪುರದಲ್ಲಿ 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಇದೇ ಮೊದಲ ಬಾರಿಗೆಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸುತ್ತಿದೆ.

334 ಸ್ಥಾನಗಳ ಪೈಕಿ ಬಿಜೆಪಿ ಈಗ 112 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 222 ಸ್ಥಾನಗಳಿಗೆ ಒಟ್ಟು 785 ಸ್ಪರ್ಧಿಗಳು ಕಣದಲ್ಲಿದ್ದಾರೆ. ನವೆಂಬರ್ 25 ರಂದು ಚುನಾವಣೆ ನಡೆಯಲಿದೆ. 28ಕ್ಕೆ ಫಲಿತಾಂಶ ಹೊರಬೀಳಲಿದೆ.

ADVERTISEMENT

ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (51 ವಾರ್ಡ್), 13 ಮುನ್ಸಿಪಲ್ ಕೌನ್ಸಿಲ್, ಆರು ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆಯುತ್ತಿದೆ.

ಅಂಬಾಸಾ, ಜಿರಾನಿಯಾ, ಮೋಹನ್‌ಪುರ, ರಾಣೀರ್‌ಬಜಾರ್, ಬಿಶಾಲ್‌ಗಢ್, ಉದಯ್‌ಪುರ ಮತ್ತು ಸಾಂತಿರ್‌ಬಜಾರ್ ಮುನ್ಸಿಪಲ್‌ ಕೌನ್ಸಿಲ್‌ಗಲ್ಲಿ ವಿರೋಧ ಪಕ್ಷಗಳಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ.

‘ಬಿಜೆಪಿಯ ಗೂಂಡಾಗಳುನಮ್ಮ ಅಭ್ಯರ್ಥಿಗಳನ್ನು ಹಿಂಸಿಸಿನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ’ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಆರೋಪಿಸಿದ್ದಾರೆ.

‘ಚುನಾವಣೆಯ ವೇಳಾಪಟ್ಟಿ ಪ್ರಕಟಣೆಗೂ ಮೊದಲೇ ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ನಮ್ಮ ಪಕ್ಷದ ಹಲವು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು, ಐದು ಮುನ್ಸಿಪಲ್ ಕೌನ್ಸಿಲ್ ಮತ್ತು ಎರಡು ನಗರ ಪಂಚಾಯತ್‌ಗಳಲ್ಲಿ ನಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ,’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತ್ರಿಪುರಾದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಬಯಸುತ್ತಿರುವ ಟಿಎಂಸಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿತ್ತು.

ಚುನಾವಣೆಯಲ್ಲಿ ಒಟ್ಟು 5,94,772 ಮತದಾರರು ಮತ ಚಲಾಯಿಸಲಿದ್ಲಾರೆ. ಇದರಲ್ಲಿ, ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.