ADVERTISEMENT

ಅಂಧೇರಿ ಪೂರ್ವ ಉಪ ಚುನಾವಣೆ: ನಾಮಪತ್ರ ಹಿಂಪಡೆದ ಬಿಜೆಪಿ ಅಭ್ಯರ್ಥಿ

ಉದ್ಧವ್‌ ಬಣದ ಅಭ್ಯರ್ಥಿ ರುತುಜಾ ಅವಿರೋಧ ಆಯ್ಕೆ ನಿಶ್ಚಿತ

ಪಿಟಿಐ
Published 17 ಅಕ್ಟೋಬರ್ 2022, 11:13 IST
Last Updated 17 ಅಕ್ಟೋಬರ್ 2022, 11:13 IST
ರುತುಜಾ ಲಟ್ಕೆ 
ರುತುಜಾ ಲಟ್ಕೆ    

ಮುಂಬೈ: ಬಿಜೆಪಿ ಅಭ್ಯರ್ಥಿ ಮುರ್ಜಿ ಪಟೇಲ್‌ ಅವರು ಅಂಧೇರಿ ಪೂರ್ವ ವಿಧಾನಸಭೆ ಕ್ಷೇತ್ರದ ಉಪ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅವರು ಸೋಮವಾರ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿಉದ್ಧವ್‌ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ಲಟ್ಕೆ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.

ಶಿವಸೇನಾ ಶಾಸಕ ರಮೇಶ್‌ ಲಟ್ಕೆ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನವೆಂಬರ್‌ 3 ರಂದು ಚುನಾವಣೆ ನಿಗದಿಯಾಗಿತ್ತು. ಉದ್ಧವ್‌ ಬಣದಿಂದ ರಮೇಶ್‌ ಪತ್ನಿ ರುತುಜಾ ಸ್ಪರ್ಧಿಸಿದ್ದರು. ಅವರಿಗೆ ಎನ್‌ಸಿಪಿ ಬೆಂಬಲ ಸೂಚಿಸಿತ್ತು. ಬಿಜೆಪಿಯು ಮುರ್ಜಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು.

ADVERTISEMENT

ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ, ಕಣದಿಂದ ಹಿಂದೆ ಸರಿಯುವಂತೆ ಭಾನುವಾರ ಬಿಜೆಪಿಗೆ ಮನವಿ ಮಾಡಿದ್ದರು. ಈ ಸಂಬಂಧಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಪತ್ರವನ್ನೂ ಬರೆದಿದ್ದರು. ರುತುಜಾ ಅವರ ಅವಿರೋಧ ಆಯ್ಕೆಗೆ ಎಲ್ಲಾ ಪಕ್ಷಗಳು ಸಹಕರಿಸಬೇಕೆಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಕೂಡ ಮನವಿ ಮಾಡಿದ್ದರು.

‘ಅಂಧೇರಿ ಪೂರ್ವ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಸ್ಪರ್ಧಾ ಕಣದಿಂದ ಬಿಜೆಪಿ ಹಿಂದೆ ಸರಿಯಲು ನಿರ್ಧರಿಸಿದೆ. ನಮ್ಮ ಅಭ್ಯರ್ಥಿ ಸೋಮವಾರ ನಾಮಪತ್ರ ಹಿಂಪಡೆದಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು’ ಎಂದು ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬವನ್‌ಕುಳೆ ತಿಳಿಸಿದ್ದಾರೆ.

‘ಅಭ್ಯರ್ಥಿ ಹಿಂಪಡೆಯುವಂತೆ ಬಿಜೆಪಿಗೆ ಮನವಿ ಮಾಡಿದ್ದ ರಾಜ್‌ ಠಾಕ್ರೆ, ಶರದ್‌ ಪವಾರ್‌ ಮತ್ತು ಏಕನಾಥ ಶಿಂದೆ ಬಣದ ಪ್ರತಾಪ್‌ ಸರ್‌ನಾಯಕ್‌ ಅವರಿಗೆ ಆಭಾರಿಯಾಗಿದ್ದೇನೆ. ನಮ್ಮ ನಾಯಕ ಉದ್ಧವ್‌ ಠಾಕ್ರೆಯವರನ್ನು ಶೀಘ್ರವೇ ಭೇಟಿ ಮಾಡಿ ಮುಂದಿನ ಪ್ರಕ್ರಿಯೆ ಬಗ್ಗೆ ಚರ್ಚಿಸುತ್ತೇನೆ’ ಎಂದು ರುತುಜಾ ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿಗೆ ಹೀನಾಯ ಸೋಲಿನ ಅರಿವಾಗಿರಬಹುದು’
‘ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಹೀನಾಯ ಸೋಲು ಉಂಟಾಗುತ್ತದೆ ಎಂಬುದು ಬಿಜೆಪಿಗೆ ಅರಿವಾಗಿದೆ. ಹೀಗಾಗಿ ಆ ಪಕ್ಷವು ಸ್ಪರ್ಧಾ ಕಣದಿಂದ ಹಿಂದೆ ಸರಿದಿದೆ’ ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್‌ ಪಾಟೀಲ್‌ ಹೇಳಿದ್ದಾರೆ.

‘ಮಹಾರಾಷ್ಟ್ರ ಸರ್ಕಾರವು ರುತುಜಾ ಅವರಿಗೆ ಮಾನಸಿಕ ಕಿರುಕುಳ ನೀಡಿತ್ತು. ಬೃಹತ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಉದ್ಯೋಗಿಯಾಗಿದ್ದ ರುತುಜಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಿಎಂಸಿ ಆಡಳಿತ ಅವರ ರಾಜೀನಾಮೆ ಅಂಗೀಕರಿಸಲು ಬೇಕಂತಲೇ ತಡಮಾಡಿತ್ತು. ಬಾಂಬೆ ಹೈಕೋರ್ಟ್‌ ಮೊರೆ ಹೋಗುವಂತೆಯೂ ಮಾಡಿತ್ತು. ಅವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನೂ ಹೊರಿಸಿತ್ತು. ಚುನಾವಣಾ ಆಯೋಗವು ಶಿವಸೇನಾ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಬಿಜೆಪಿ ಮತ್ತು ಶಿಂದೆ ಬಣದವರು ಮಾಡಿದ್ದರು. ಈ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದರು’ ಎಂದು ತಿಳಿಸಿದ್ದಾರೆ.

*

ನಾನು ಪಕ್ಷದ ತೀರ್ಮಾನವನ್ನು ಗೌರವಿಸುತ್ತೇನೆ. ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ.
–ನಾನಾ ಪಟೋಲೆ, ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.