ADVERTISEMENT

ಮೌರ್ಯ ಬೆಂಬಲಿಗರ ಮೇಲೆ ದಾಳಿ: ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ

ಕಾರುಗಳು ಜಖಂ, ಎಸ್‌ಪಿ ಕಾರ್ಯಕರ್ತರಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 20:06 IST
Last Updated 2 ಮಾರ್ಚ್ 2022, 20:06 IST
**EDS: IMAGE POSTED @yadavakhilesh** Lucknow: Former UP minister Swami Prasad Maurya (L) joins Samajwadi Party in the presence of the party chief Akhilesh Yadav, in Lucknow, Tuesday, Jan 11, 2022. (PTI Photo) (PTI01_11_2022_000058B)
**EDS: IMAGE POSTED @yadavakhilesh** Lucknow: Former UP minister Swami Prasad Maurya (L) joins Samajwadi Party in the presence of the party chief Akhilesh Yadav, in Lucknow, Tuesday, Jan 11, 2022. (PTI Photo) (PTI01_11_2022_000058B)   

ಗೋರಖಪುರ (ಪಿಟಿಐ): ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿಗರ ಮೇಲೆ ದಾಳಿ ನಡೆಸಿದ್ದಾರೆ ಎಂದುಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ.ಬಿಜೆಪಿ ತೊರೆದಿದ್ದ ಮೌರ್ಯ ಅವರು ಈ ಬಾರಿಯ ಚುನಾವಣೆಯಲ್ಲಿ ಫಜಿಲ್‌ನಗರ ಕ್ಷೇತ್ರದಿಂದಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಸ್ವಾಮಿಪ್ರಸಾದ್ ಮೌರ್ಯ ಅವರ ಪುತ್ರಿ ಮತ್ತುಬಿಜೆಪಿ ಸಂಸದೆ ಸಂಘಮಿತ್ರ ಮೌರ್ಯ ಅವರೂ ಸಹ ತಮ್ಮ ತಂದೆ ಮಾಡಿರುವ ಆರೋಪಕ್ಕೆ ದನಿಗೂಡಿಸಿದ್ದಾರೆ.ತಮ್ಮ ತಂದೆಯ ಪರವಾಗಿ ಮೂರ್ನಾಲ್ಕು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಂಘಮಿತ್ರ ಅವರು ಘಟನೆಯನ್ನು ಖಂಡಿಸಿದ್ದಾರೆ.

ಈ ದಾಳಿಯನ್ನು ಖಂಡಿಸಿರುವ ಅಖಿಲೇಶ್ ಯಾದವ್,‘ಬಾಕಿ ಉಳಿದಿರುವ ಎರಡು ಹಂತಗಳ ಮತದಾನದಲ್ಲಿ ಬಿಜೆಪಿಗೆ ಒಂದೂ ಸ್ಥಾನ ಸಿಗದಂತೆ ಮಾಡುವುದಾಗಿ’ ಪ್ರತಿಜ್ಞೆ ಮಾಡಿದ್ದಾರೆ.

ADVERTISEMENT

ಘಟನೆಯ ಬಗ್ಗೆ ಖುಷಿನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ‘ಪುಲ್ವಾರಿಯಾದಲ್ಲಿ ಬಿಜೆಪಿ ಬೆಂಬಲಿಗರು ಮೆರವಣಿಗೆ ಹೋಗುತ್ತಿದ್ದ ಸ್ಥಳವನ್ನು, ಮೌರ್ಯ ಅವರ 25 ಬೆಂಬಲಿಗರ ಗುಂಪು ಸಮೀಪಿಸಿತು. ಈ ವೇಳೆ ಘೋಷಣೆಗಳನ್ನು ಕೂಗಲಾಯಿತು. ಕಲ್ಲು ತೂರಾಟ ನಡೆದಿರುವುದು ವಿಡಿಯೊಗಳಲ್ಲಿ ದಾಖಲಾಗಿದೆ. ಮೌರ್ಯ ಅವರ ಬೆಂಗಾವಲು ವಾಹನಗಳು ಜಖಂಗೊಂಡಿವೆ’ ಎಂದು ಅವರು ತಿಳಿಸಿದ್ದಾರೆ.

ಎರಡೂ ಕಡೆಗಳಿಂದ ದೂರು ಸಲ್ಲಿಕೆಯಾಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಲು ಮೊದಲು ಅನುಮತಿ ನೀಡಲಾಗಿತ್ತು. ಮೆರವಣಿಗೆಗೆ ಅವರು ಅನುಮತಿ ಪಡೆದಿದ್ದರು. ಎಸ್‌ಪಿ ಅಭ್ಯರ್ಥಿಯ ವಾಹನದ ಜೊತೆ ಕೇವಲ ಒಂದು ವಾಹನ ಸಂಚರಿಸುವಂತೆ ಸೂಚಿಸಲಾಗಿತ್ತು.

‘ವಿಷುಪುರ ಖಾನ್ವಾ ಪಟ್ಟಿ ಗ್ರಾಮದ ಬಳಿ ರೋಡ್‌ಶೋ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಲಾಠಿ, ಕಲ್ಲುಗಳಿಂದ ತಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಹಲವರು ಗಾಯಗೊಂಡಿದ್ದಾರೆ. ಕೆಲವು ವಾಹನಗಳಿಗೆ ಹಾನಿಯಾಗಿದೆ’ ಎಂದು ಮೌರ್ಯ ಆರೋಪಿಸಿದ್ದಾರೆ. ಈ ದಾಳಿಯಲ್ಲಿ ತಮ್ಮ ವಾಹನದ ಚಾಲಕನ ಕಿವಿಗೆ ಪೆಟ್ಟು ಬಿದಿದೆ ಎಂದು ಅವರು ಹೇಳಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಮೌರ್ಯ ಅವರು ಸ್ಪರ್ಧಿಸಿರುವ ಫಜಿಲ್‌ನಗರ ಕ್ಷೇತ್ರದಲ್ಲಿ ಮತದಾನವು ಮಾರ್ಚ್ 3ರಂದು ನಡೆಯಲಿದೆ. ಚುನಾವಣಾ ಪ್ರಚಾರಕ್ಕೆ ಮಂಗಳವಾರ ಕೊನೆಯ ದಿನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.