ADVERTISEMENT

ಉತ್ತರ ಪ್ರದೇಶ: ಸೈಕಲ್‌ಗಳ ಮೇಲೆ ಬುಲ್ಡೋಜರ್‌ ಹರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಐಎಎನ್ಎಸ್
Published 13 ಮಾರ್ಚ್ 2022, 6:19 IST
Last Updated 13 ಮಾರ್ಚ್ 2022, 6:19 IST
ಬದಾಯೂಂ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೈಕಲ್‌ಗಳ ಮೇಲೆ ಬುಲ್ಡೋಜರ್ ಹರಿಸಿ ಸಂಭ್ರಮಿಸಿದ್ದಾರೆ – ಐಎಎನ್‌ಎಸ್ ಚಿತ್ರ
ಬದಾಯೂಂ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೈಕಲ್‌ಗಳ ಮೇಲೆ ಬುಲ್ಡೋಜರ್ ಹರಿಸಿ ಸಂಭ್ರಮಿಸಿದ್ದಾರೆ – ಐಎಎನ್‌ಎಸ್ ಚಿತ್ರ   

ಲಖನೌ: ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಂದರ್ಭದಲ್ಲೆಲ್ಲಾ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನ ಜತೆ ‘ಬುಲ್ಡೋಜರ್’ ಎಂಬ ಪದ ಥಳಕು ಹಾಕಿಕೊಂಡಿತ್ತು. ಇದೀಗ ಅದೇ ಹೆಸರಿನ ಬುಲ್ಡೋಜರ್ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ.

ಬದಾಯೂಂ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೈಕಲ್‌ಗಳ ಮೇಲೆ ಬುಲ್ಡೋಜರ್ ಹರಿಸಿ ಸಂಭ್ರಮಿಸಿದ್ದಾರೆ. ಅಂದಹಾಗೆ, ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ ಸೈಕಲ್ ಆಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೈಕಲ್‌ಗಳನ್ನು ಬಿಜೆಪಿ ‘ಬುಲ್ಡೋಜ್’ ಮಾಡಲಿದೆ ಎಂದು ಯೋಗಿ ಕೂಡ ಚುನಾವಣಾ ಪ್ರಚಾರವೊಂದರಲ್ಲಿ ಹೇಳಿದ್ದರು.

ADVERTISEMENT

‘ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಿರುವುದರಿಂದ ನಮಗೆ ತುಂಬಾ ಸಂತಸವಾಗಿದೆ. ಬಿಜೆಪಿಗೆ ಹಿಂದಿನಿಂದ ಇರಿದವರಿಗೆ ಸರಿಯಾದ ಉತ್ತರ ದೊರೆತಿದೆ. ಬಿಜೆಪಿಯ ಗೆಲುವು ಜನರು ಪ್ರಾಮಾಣಿಕ ಸರ್ಕಾರವನ್ನು ಬಯಸಿದ್ದಾರೆ ಎಂಬುದನ್ನು ನಿರೂಪಿಸಿದೆ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

‘ಬುಲ್ಡೋಜರ್ ಬಾಬಾ (ಯೋಗಿ ಆದಿತ್ಯನಾಥ್) ಮಾಫಿಯಾ ಮಟ್ಟ ಹಾಕುವ ಕೆಲಸ ಮುಂದುವರಿಸಲಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಗೂಂಡಾಗಳಿನ್ನು ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಯೋಗಿಯ ಗೆಲುವು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಯೋಗಿ ಅವರನ್ನು ಕಾಂಗ್ರೆಸ್ ಪಕ್ಷವು ‘ಬುಲ್ಡೋಜರ್‌ನಾಥ್’ ಎಂದು ಹೀಯಾಳಿಸಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲ ಹೆಸರುಗಳನ್ನು ಬದಲಾಯಿಸಿದರು. ಈಗ ಅವರ ಹೆಸರೇ ಬದಲಾಗಿದ್ದು, ‘ಬಾಬಾ ಬುಲ್ಡೋಜರ್’ ಎಂದಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದರು. ಇದಕ್ಕೆಲ್ಲ ಉತ್ತರವೆಂಬಂತೆ ಪ್ರತಿಕ್ರಿಯಿಸಿದ್ದ ಯೋಗಿ, ಬಿಜೆಪಿ ಸರ್ಕಾರ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದೆ ಆದರೆ ಮಾಫಿಯಾ ವಿರುದ್ಧ ಬುಲ್ಡೋಜರ್‌ಗಳನ್ನು ಇರಿಸಿಕೊಂಡಿದೆ ಎಂದು ಹೇಳಿದ್ದರು.

ಉತ್ತರ ಪ್ರದೇಶ ಚುನಾವಣೆಯಲ್ಲಿ 255 ಸ್ಥಾನ ಗಳಿಸುವ ಮೂಲಕ ಬಿಜೆಪಿ ಬಹುಮತ ಗಳಿಸಿದ್ದು ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ. ಸಮಾಜವಾದಿ ಪಕ್ಷ 111 ಸ್ಥಾನ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.