ADVERTISEMENT

ಪಶ್ಚಿಮ ಬಂಗಾಳ: ಕೊಕೇನ್ ಸಹಿತ ಬಿಜೆಪಿ ಯುವ ಮೋರ್ಚಾ ನಾಯಕಿ ಬಂಧನ

ಪಿಟಿಐ
Published 19 ಫೆಬ್ರುವರಿ 2021, 15:22 IST
Last Updated 19 ಫೆಬ್ರುವರಿ 2021, 15:22 IST
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)   

ಕೋಲ್ಕತ್ತ: ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಕೊಕೇನ್ ಸಹಿತ ದಕ್ಷಿಣ ಕೋಲ್ಕತ್ತದ ‘ನ್ಯೂ ಅಲಿಪೋರ್’ ಪ್ರದೇಶದಿಂದ ಬಂಧಿಸಲಾಗಿದೆ. ಅವರ ಜತೆ ಕಾರಿನಲ್ಲಿದ್ದ, ಅವರ ಸ್ನೇಹಿತ ಪ್ರಬೀರ್ ಕುಮಾರ್ ದೇ ಎಂಬುವವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಸ್ವಾಮಿ ಅವರು ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದಾರೆ.

ಗೋಸ್ವಾಮಿ ಅವರ ಕೈಚೀಲ, ಕಾರಿನ ಇತರ ಭಾಗಗಳಿಂದ 100 ಗ್ರಾಂ ಕೊಕೇನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗೋಸ್ವಾಮಿ ಅವರು ಸ್ವಲ್ಪ ಸಮಯದಿಂದ ಡ್ರಗ್ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದ್ದರು. ಅವರು ಇಂದು ಡ್ರಗ್ ಪೂರೈಕೆದಾರ ಪ್ರಬೀರ್‌ ಜತೆ ಡ್ರಗ್ಸ್ ಅನ್ನು ಖರೀದಿದಾರರಿಗೆ ನೀಡಲು ‘ನ್ಯೂ ಅಲಿಪೋರ್’ ಪ್ರದೇಶಕ್ಕೆ ಬರುವ ಬಗ್ಗೆ ಖಚಿತ ಸುಳಿವು ಲಭಿಸಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಗೋಸ್ವಾಮಿ ಅವರು ಯಾವುದೇ ಡ್ರಗ್ ದಂದೆಯಲ್ಲಿ ಶಾಮೀಲಾಗಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದ್ದಾರೆ.

ಗೋಸ್ವಾಮಿ ಅವರ ಬಳಿ ಡ್ರಗ್ಸ್ ಪತ್ತೆಯಾಗಿರುವ ಪ್ರಕರಣದ ಹಿಂದೆ ಪೊಲೀಸರ ಕೈವಾಡ ಇರುವ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ಆದಾಗ್ಯೂ, ಯುವ ನಾಯಕಿ ತಪ್ಪೆಸಗಿದ್ದು ನಿಜವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಿ ಎಂದೂ ಪಕ್ಷ ಹೇಳಿದೆ.

‘ಈ ಹಿಂದೆ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಪೊಲೀಸರು ಹಲವು ಬಿಜೆಪಿ ನಾಯಕರನ್ನು ಹೆಸರಿಸಿದ್ದು ನೋಡಿದ್ದೇವೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಹಾಗಾಗಿ ಈಗ ಏನೂ ಹೇಳಲಾರೆ. ಪಮೇಲಾ ಯುವತಿ. ಅವರೇನಾದರೂ ತಪ್ಪು ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಿ’ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.