ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಮೂರು ಗಡಿಗಳಲ್ಲಿ (ಸಿಂಘು, ಗಾಜಿಪುರ ಮತ್ತು ಟಿಕ್ರಿ) ನಡೆಯುತ್ತಿರುವ ಪ್ರತಿಭಟನೆಯು ಆರು ತಿಂಗಳು ಪೂರ್ಣಗೊಳಿಸಿದ ಸಂದರ್ಭದಲ್ಲಿ ರೈತರು ಬುಧವಾರ ಕರಾಳ ದಿನ ಆಚರಿಸಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರವು ಈ ಕಾನೂನುಗಳನ್ನು ಜಾರಿಗೆ ತರಬಾರದಿತ್ತು. ಈಗ ನಾವು ಹಿಂದಿರುಗಬೇಕು ಎಂದು ಸರ್ಕಾರವು ಬಯಸುವುದಾದರೆ ನಮ್ಮ ಮಾತು ಕೇಳಲಿ. ಕಾಯ್ದೆಗಳನ್ನು ರದ್ದುಪಡಿಸಲಿ. ನಮ್ಮ ಬೇಡಿಕೆ ಈಡೇರುವವರೆಗೆ ಇಲ್ಲಿಂದ ಹೋಗುವುದಿಲ್ಲ’ ಎಂದು
ರೈತ ಮುಖಂಡ ಅವತಾರ್ ಸಿಂಗ್ ಮೆಹ್ಮಾ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಪ್ರತಿಭಟನೆ ಸ್ಥಳಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.ಕೋವಿಡ್–19 ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಜನರು ಒಟ್ಟು ಸೇರಬಾರದು ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದರು. ಜತೆಗೆ, ಯಾವುದೇ ಪರಿಸ್ಥಿತಿ ಎದುರಿಸಲು ಪೊಲೀಸರು ಸನ್ನದ್ಧರಾಗಿ ಇದ್ದರು.
ಪ್ರತಿಭಟನೆಯ ಸ್ಥಳಗಳಲ್ಲಿ ಮಾತ್ರವಲ್ಲ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಗ್ರಾಮಗಳಲ್ಲಿಯೂ ಕಪ್ಪು ಬಾವುಟ ಹಾರಿಸಲಾಗಿದೆ ಎಂದು ಮೆಹ್ಮಾ ಹೇಳಿದ್ದಾರೆ.ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಗಾಜಿಪುರ ಗಡಿಯಲ್ಲಿ ಕರಾಳ ದಿನ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರ ಪ್ರತಿಕೃತಿ ಸುಡಲಾಯಿತು.
ಕಾಯ್ದೆಗಳ ವಿರುದ್ಧ ನಿರ್ಣಯ: ಸ್ಟಾಲಿನ್
ಸಂಸತ್ತು ಅನುಮೋದನೆ ಕೊಟ್ಟಿರುವ ಮೂರುಕೃಷಿ ಕಾಯ್ದೆಗಳ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬುಧವಾರ ಹೇಳಿದ್ದಾರೆ.
ಮೂರೂ ಕಾಯ್ದೆಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
***
ಬಿಜೆಪಿ ಸರ್ಕಾರವು ತನ್ನ ಅಹಂನಿಂದಾಗಿ ರೈತರ ಜತೆ ನಡೆದುಕೊಂಡ ರೀತಿಯು ದೇಶದ ಪ್ರತಿ ಪೌರನಲ್ಲಿಯೂ ಆಕ್ರೋಶ ಮೂಡಿಸಿದೆ.
-ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ
***
ಆರು ತಿಂಗಳಲ್ಲಿ ರೈತರು ದಣಿದು ಪ್ರತಿಭಟನೆ ನಿಲ್ಲಿಸುತ್ತಾರೆ ಎಂದು ಸರ್ಕಾರ ಭಾವಿಸಿತ್ತು. ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಮಾತುಕತೆ ನಡೆಸುವುದು ಸರ್ಕಾರದ ಕರ್ತವ್ಯ.
-ನವಾಬ್ ಮಲಿಕ್, ಎನ್‌ಸಿಪಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.