ADVERTISEMENT

ಬಡ್ಡಿ ಮನ್ನಾ ಮಾಡಿದರೆ ₹6 ಲಕ್ಷ ಕೋಟಿ ನಷ್ಟ: ಕೇಂದ್ರ

ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 19:31 IST
Last Updated 8 ಡಿಸೆಂಬರ್ 2020, 19:31 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಎಲ್ಲಾ ರೀತಿಯ ಸಾಲಗಳ ಕಂತು ಮರುಪಾವತಿ ಅವಧಿ ಮುಂದೂಡಿಕೆ ಸಂದರ್ಭದ ಬಡ್ಡಿಯನ್ನು ಮನ್ನಾ ಮಾಡಿದರೆ, ಆ ಮೊತ್ತವು ₹6 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಈ ಹೊರೆಯನ್ನು ಬ್ಯಾಂಕ್‌ಗಳ ಮೇಲೆ ಹೊರಿಸಿದರೆ, ಅವುಗಳು ತಮ್ಮ ನಿವ್ವಳ ಮೌಲ್ಯದ ಬಹುದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆಮಂಗಳವಾರ ತಿಳಿಸಿದೆ.

‘ಬಡ್ಡಿ ಮನ್ನಾ ಮಾಡಿದರೆ ಹೆಚ್ಚಿನ ಬ್ಯಾಂಕ್‌ಗಳ ಅಡಿಪಾಯವೇ ಅಲುಗಾಡಬಹುದು. ಈ ಕಾರಣಕ್ಕಾಗಿಯೇ ಸಾಲದ ಕಂತುಗಳ ಮರುಪಾವತಿಯನ್ನು ಮುಂದೂಡುವ ನಿರ್ಧಾರ ಮಾಡಲಾಗಿತ್ತೆ ವಿನಾ ಬಡ್ಡಿ ಮನ್ನಾದ ಯೋಚನೆಯನ್ನೇ ಮಾಡಿರಲಿಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಉದಾಹರಣೆಯನ್ನು ಮಾತ್ರ ತೆಗೆದುಕೊಂಡರೂ, ಎಲ್ಲಾ ಸಾಲಗಳ ಮೇಲಿನ ಆರು ತಿಂಗಳ ಅವಧಿಯ ಬಡ್ಡಿ ಮನ್ನಾ ಮಾಡಿದರೆ, 65 ವರ್ಷಗಳಲ್ಲಿ ಗಳಿಸಿದ ನಿವ್ವಳ ಮೌಲ್ಯದ ಅರ್ಧದಷ್ಟನ್ನು ಈ ಬ್ಯಾಂಕ್‌ ಕಳೆದುಕೊಳ್ಳಬೇಕಾಗುತ್ತದೆ. ಹೀಗಿರುವಾಗ, ಚಕ್ರಬಡ್ಡಿಯ ಭಾರವನ್ನು ಬ್ಯಾಂಕ್‌ಗಳಿಂದ ಮಾತ್ರ ಹೊರಲು ಸಾಧ್ಯವಾಗದು. ಅದನ್ನು ಠೇವಣಿದಾರರಿಗೆ ವರ್ಗಾವಣೆ ಮಾಡುವುದು ಅನಿವಾರ್ಯ’ ಎಂದರು.

ADVERTISEMENT

‘ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಪ್ರತಿ ಸಾಲದ ಖಾತೆಗೆ ಪ್ರತಿಯಾಗಿ 8.5 ಠೇವಣಿ ಖಾತೆಗಳಿವೆ. ಆರು ತಿಂಗಳ ಸಾಲ ಮುಂದೂಡಿಕೆ ಅವಧಿಯಲ್ಲಿ ತನ್ನ ಎಲ್ಲಾ ಸಾಲಗಳ ಮೇಲಿನ ಬಡ್ಡಿಯ ಮೊತ್ತವು ₹88,078 ಕೋಟಿ ಆಗುತ್ತದೆ. ಈ ಅವಧಿಯಲ್ಲಿ ಠೇವಣಿದಾರರಿಗೆ ನೀಡಬೇಕಾದ ಬಡ್ಡಿಯ ಮೊತ್ತವು ₹75,157 ಕೋಟಿಯಷ್ಟಿದೆ ಎಂದು ಎಸ್‌ಬಿಐ ತಿಳಿಸಿದೆ’ ಎಂದು ಮೆಹ್ತಾ ಮಾಹಿತಿ ನೀಡಿದರು.

ಕೊರೊನಾ ಕಾರಣದಿಂದ ಎದುರಾದ ಸಂಕಷ್ಟವನ್ನು ನಿವಾರಿಸಲು ಸಾಲ ಮರುಪಾವತಿಯಲ್ಲಿ ಕೆಲವು ರಿಯಾಯಿತಿಗಳನ್ನು ಕೊಡುವಂತೆ ಕೋರಿ ವಿವಿಧ ಕೈಗಾರಿಕಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯವು, ‘ಅರ್ಥವ್ಯವಸ್ಥೆಯು ಅಲ್ಲೋಲಕಲ್ಲೋಲವಾಗಿರುವ ಈ ಸಂದರ್ಭದಲ್ಲಿ ಅದಕ್ಕೆ ಇನ್ನಷ್ಟು ಹಾನಿ ಉಂಟುಮಾಡುವ ಯಾವುದೇ ಆದೇಶವನ್ನು ನೀಡಲು ಸಿದ್ಧವಿಲ್ಲ’ ಎಂದು ಹೇಳಿತು. ವಿಚಾರಣೆಯು ಬುಧವಾರ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.