ADVERTISEMENT

ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ವಿವಾದದ ಬಗ್ಗೆ ಬಂಗಾಳ ರಾಜ್ಯಪಾಲರ ಹೇಳಿಕೆ

ಪಿಟಿಐ
Published 23 ನವೆಂಬರ್ 2025, 15:56 IST
Last Updated 23 ನವೆಂಬರ್ 2025, 15:56 IST
ಸಿ.ವಿ.ಆನಂದ ಬೋಸ್‌
ಸಿ.ವಿ.ಆನಂದ ಬೋಸ್‌   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎತ್ತಿರುವ ಕಳವಳದ ಬಗ್ಗೆ ವಿವರವಾಗಿ ಪರಿಶೀಲಿಸಬೇಕು ಎಂದು ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಅರೆಕಾಲಿಕ ಶಿಕ್ಷಕಿ ರಿಂಕೂ ತರಫ್ದಾರ್‌ (52) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಎಸ್‌ಐಆರ್‌ ಕೆಲಸದ ಹೊರೆಯೇ ಸಾವಿಗೆ ಕಾರಣ’ ಎಂದು ಮೃತರ ಕುಟುಂಬವು ಆರೋಪಿಸಿತ್ತು. ಬಿಎಲ್‌ಒ ಬರೆದಿಟ್ಟಿದ್ದಾರೆ ಎನ್ನಲಾದ ಮರಣ ಪತ್ರವನ್ನು ಮಮತಾ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ರಾಜ್ಯಪಾಲರ ಹೇಳಿಕೆ ಹೊರಬಿದ್ದಿದೆ.

‘ಇಂತಹ ಸಂದರ್ಭಗಳಲ್ಲಿ, ಯಾವುದೇ ಆಲೋಚನೆ ಮಾಡದೆ ಥಟ್ಟನೆ ಪ್ರತಿಕ್ರಿಯೆಗಳನ್ನು ನೀಡದಿರುವುದೇ ಉತ್ತಮ. ಮುಖ್ಯಮಂತ್ರಿಗಳು ಎತ್ತಿರುವ ವಿಷಯದ ಕುರಿತು ವಿವರವಾದ ಮತ್ತು ಆಳವಾದ ಪರಿಶೀಲನೆ ಅಗತ್ಯ’ ಎಂದು ಬೋಸ್ ಅವರು ರಾಜಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಎಸ್‌ಐಆರ್‌ ಕಾರಣದಿಂದ ರಾಜ್ಯದಲ್ಲಿ ಬಿಎಲ್ಒಗಳೂ ಸೇರಿದಂತೆ ಇಲ್ಲಿಯವರೆಗೆ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಈ ಸಾವುಗಳ ಹೊಣೆಯನ್ನು ಚುನಾವಣಾ ಆಯೋಗ ಹೊರಬೇಕು ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.