
ಶ್ರೀಹರಿಕೋಟಾ (ಆಂಧ್ರ ಪ್ರದೇಶ): ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್–2’ ಅನ್ನು ನಭಕ್ಕೆ ಹೊತ್ತೊಯ್ಯುವ ಎಲ್‌ವಿಎಂ3–ಎಂ6 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಇಸ್ರೊ ಮಂಗಳವಾರ ತಿಳಿಸಿದೆ.
‘ಬ್ಲೂಬರ್ಡ್ ಬ್ಲಾಕ್–2’ ಉಪಗ್ರಹವನ್ನು ಡಿಸೆಂಬರ್ 24ರಂದು ಬೆಳಿಗ್ಗೆ 8.54ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದ ಉಡ್ಡಯನ ಮಾಡಲು ಇಸ್ರೊ ಸಿದ್ಧತೆ ಮಾಡಿಕೊಂಡಿದೆ.
ಎಲ್‌ವಿಎಂ3 ರಾಕೆಟ್, ಇದೇ ಮೊದಲ ಬಾರಿಗೆ 6,100 ಕೆ.ಜಿ ತೂಕದ ಪೇಲೋಡ್‌ಗಳನ್ನು ನಭಕ್ಕೆ ಹೊತ್ತೊಯ್ಯುತ್ತಿದೆ.
ಭೂ ಮೇಲ್ಮೈನಿಂದ 600 ಕಿ.ಮೀ. ಎತ್ತರದಲ್ಲಿ ವಾಣಿಜ್ಯ ಉದ್ದೇಶದ ಉಪಗ್ರಹವನ್ನು ಸೇರಿಸುವ ಮಹತ್ವದ ಯೋಜನೆ ಇದಾಗಿದೆ. ಬ್ಲೂಬರ್ಡ್ ಬ್ಲಾಕ್–2 ಉಪಗ್ರಹವು ಉಡಾವಣೆಯಾದ 15 ನಿಮಿಷಗಳ ಬಳಿಕ ಉಡಾವಣಾ ವಾಹಕದಿಂದ ಪ್ರತ್ಯೇಕಗೊಳ್ಳಲಿದೆ.
ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಅಮೆರಿಕ ಮೂಲದ ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವೆ ನಡೆದ ಖಾಸಗಿ ಒಪ್ಪಂದದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಇಸ್ರೊ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂಗಸಂಸ್ಥೆಯಾಗಿದೆ.
ಉಪಗ್ರಹ ಉಡಾವಣೆ ಮುನ್ನ ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರು ಮಂಗಳವಾರ ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
6,100 ಕೆ.ಜಿ– ಬ್ಲೂಬರ್ಡ್ ಬ್ಲಾಕ್–2ನ ತೂಕ
4,400 ಕೆ.ಜಿ.– ಎಲ್‌ವಿಎಂ3–ಎಂ5 ರಾಕೆಟ್‌ನಲ್ಲಿ ಈ ಹಿಂದೆ ಕೊಂಡೊಯ್ದಿದ್ದ ಉಪಗ್ರಹದ ತೂಕ (ನವೆಂಬರ್ 2ರಂದು ಉಡಾವಣೆ)
43.5 ಮೀಟರ್–ಎಲ್‌ವಿಎಂ3 ರಾಕೆಟ್‌ನ ಎತ್ತರ
*ರಾಕೆಟ್ ವಿನ್ಯಾಸ ಮತ್ತು ಅಭಿವೃದ್ಧಿ: ಇಸ್ರೊದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್
ಉಪಗ್ರಹದ ವಿಶೇಷತೆ
* ಜಗತ್ತಿನಾದ್ಯಂತ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ–ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಪೂರೈಸುವಂತೆ ಈ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದೆ
*ಎಎಸ್‌ಟಿ ಸ್ಪೇಸ್‌ಮೊಬೈಲ್ ಕಂಪನಿಯು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುತ್ತಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಳಕೆ ಮಾಡಬಹುದು. ಇದನ್ನು ಸರ್ಕಾರಿ ಮತ್ತು ವಾಣಿಜ್ಯ ಸೇವೆಗಳ ಅಪ್ಲಿಕೇಷನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ
*ಪ್ರತಿಯೊಬ್ಬರಿಗೂ ಎಲ್ಲಾ ಸಮಯದಲ್ಲೂ 4ಜಿ 5ಜಿ ಧ್ವನಿ ಮತ್ತು ವಿಡಿಯೊ ಕಾಲ್ ಟೆಕ್ಷ್ಟ್ ಸ್ಟ್ರೀಮಿಂಗ್ ಮತ್ತು ಡೇಟಾವನ್ನು ಒದಗಿಸುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.