
ಮುಂಬೈ(ಮಹಾರಾಷ್ಟ್ರ): ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೇರಿ ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್, ರಸಮಲೈ ಅನ್ನು ಉಲ್ಲೇಖಿಸಿ ರಾಜ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ ಠಾಕ್ರೆ ಅವರನ್ನು 'ರಾಜಮಲೈ' ಎಂದು ಅಣಕಿಸಿದ್ದಾರೆ. ಅಲ್ಲದೇ ರಸಮಲೈ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ರಸಮಲೈ ಆರ್ಡರ್ ಮಾಡಿದೆ( Ordered Some Rasmalai) #BMCResults ಎಂದೂ ಅವರು ಬರೆದುಕೊಂಡಿದ್ದಾರೆ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಕಾಯ್ದುಕೊಂಡಿದೆ. ಮತ ಎಣಿಕೆ ಪ್ರಗತಿಯಲ್ಲಿದ್ದು ಈವರೆಗೆ (ಮ.3.30) ಬಿಎಂಸಿಯ 227 ಸ್ಥಾನಗಳ ಪೈಕಿ ಬಿಜೆಪಿ 129, ಕಾಂಗ್ರೆಸ್ 15, ಶಿವಸೇನಾ ಉದ್ಧವ್ ಠಾಕ್ರೆ ಬಣ 72, ಎನ್‌ಸಿಪಿ (ಅಜಿತ್) 02 ಹಾಗೂ ಇತರರು 09 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ ವಾರ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ರಾಜ್ ಠಾಕ್ರೆ ಅವರು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರನ್ನು ‘ರಸಮಲೈ’ ಎಂದು ಅಣಕಿಸಿದ್ದರು.
ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಜ್ ಠಾಕ್ರೆ, 'ಇತ್ತೀಚೆಗೆ ತಮಿಳುನಾಡಿನಿಂದ ಯಾರೋ ‘ರಸಮಲೈ’ ಮುಂಬೈಗೆ ಬಂದಿದ್ದರು. ಬಾಂಬೆ (ಮುಂಬೈ) ಮಹಾರಾಷ್ಟ್ರ ನಗರವಲ್ಲ. ಮುಂಬೈಗೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಅವರು ಯಾರು? ಅವರಿಗೂ ಮುಂಬೈಗೂ ಏನು ಸಂಬಂಧ ಮತ್ತು ಅವರು ಇಲ್ಲಿಗೇಕೆ ಬಂದಿದ್ದರು? ಅದಕ್ಕಾಗಿಯೇ ಬಾಳಾಸಾಹೇಬರು ‘ಹಟಾವೋ ಲುಂಗಿ ಬಜಾವೋ ಪುಂಗಿ’ ಎಂದು ಹೇಳಿದ್ದರು ಎಂದು 1960 ಮತ್ತು 1970ರ ದಶಕದ ಶಿವಸೇನೆಯ ಘೋಷಣೆಯನ್ನು ಉಲ್ಲೇಖಿಸಿ ಕುಟುಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಣ್ಣಾಮಲೈ ನನ್ನನ್ನು ಅವಮಾನಿಸುವುದು ಹೊಸದೇನಲ್ಲ. ಆದರೆ, ಈಗ ಧೋತಿ, ಲುಂಗಿ ಉಲ್ಲೇಖಗಳ ಮೂಲಕ ತಮಿಳರನ್ನೇ ಅವಮಾನಿಸಲಾಗುತ್ತಿದೆ ಎಂದೂ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.