
ನವದೆಹಲಿ: 2024ರಲ್ಲಿ ನಡೆದ ಬಿಎಂಡಬ್ಲ್ಯು ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮಾಜಿ ನಾಯಕ ರಾಜೇಶ್ ಶಾ ಅವರ ಮಗ ಮಿಹಿರ್ ಶಾ ಸಲ್ಲಿಸಿದ್ದ ಜಾಮೀನು ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
‘ಈ ಹುಡುಗನಿಗೆ ಪಾಠ ಕಲಿಸಬೇಕು’ ಎಂದು ತಿಳಿಸಿದೆ.
‘ಆರೋಪಿಯು ಶ್ರೀಮಂತ ಕುಟುಂಬಕ್ಕೆ ಸೇರಿದ್ದಾನೆ. ಅವರ ತಂದೆ ರಾಜೇಶ್ ಶಾ ಅವರು ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷದ ಜೊತೆ ನಂಟು ಹೊಂದಿದ್ದಾರೆ. ಆರೋಪಿಯು ಮರ್ಸಿಡಿಸ್ ಕಾರನ್ನು ಶೆಡ್‌ನಲ್ಲಿಟ್ಟು, ಬಿಎಂಡಬ್ಲ್ಯೂ ಕಾರು ಕೊಂಡೊಯ್ದು ಅಪಘಾತ ಮಾಡಿ ನಂತರ ಪರಾರಿಯಾಗಿದ್ದಾನೆ. ಸ್ವಲ್ಪ ದಿನ ಜೈಲಿನಲ್ಲಿರಲಿ, ಆ ಹುಡುಗನಿಗೆ ಪಾಠ ಕಲಿಸಬೇಕು’ ಎಂದು ನ್ಯಾಯಮೂರ್ತಿ ದೀಪಾಂಕರ್ ದತ್ತಾ, ಎ.ಜಿ.ಮಶಿಹ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಹೈಕೋರ್ಟ್ ಜಾಮೀನು ಪಡೆಯಲು ಅವಕಾಶ ನೀಡಿದೆ ಎಂದು ಹಿರಿಯ ವಕೀಲ ರೆಬೆಕಾ ಜಾನ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಾಲಯದ ಅವಲೋಕನವನ್ನು ಗಮನಿಸಿದ ಅವರು, ಜಾಮೀನು ಅರ್ಜಿ ಹಿಂದಕ್ಕೆ ಪಡೆಯಲು ಅನುಮತಿ ಕೋರಿದರು. ಇದಕ್ಕೆ ನ್ಯಾಯಪೀಠವು ಅನುಮತಿ ನೀಡಿತು.
ಕಳೆದ ವರ್ಷ ಜುಲೈ 9ರಂದು ಮುಂಬೈನ ಬಾಂದ್ರಾ–ವರ್ಲಿ ಸೀಲಿಂಕ್‌ನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದ ಮಿಹಿರ್ ಶಾ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಬೈಕ್‌ನಲ್ಲಿದ್ದ ಕಾವೇರಿ ನಕ್ವಾ(45) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಪತಿ ಪ್ರದೀಪ್ ನಕ್ವಾ ಅವರು ತೀವ್ರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ಕಾರಿನ ಬಾನೆಟ್‌ಗೆ ಮಹಿಳೆಯ ಮೃತ ದೇಹ ಸಿಕ್ಕಿದ್ದರೂ ಕೂಡ ಕಾರು ನಿಲ್ಲಿಸದೇ, ಒಂದೂವರೆ ಕಿ.ಮೀ ತನಕ ಎಳೆದೊಯ್ದಿದ್ದನು. ಅಪಘಾತದ ವೇಳೆ ಶಾ ಅವರ ಕಾರು ಚಾಲಕ ರಾಜ್‌ಋಷಿ ಬಿದಾವತ್ ಕೂಡ ಕಾರಿನಲ್ಲಿದ್ದರು.
ಅಪಘಾತದ ಬಳಿಕ ಆರೋಪಿಯು ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದು ಕಂಡುಬಂದಿತ್ತು. ಹೀಗಿದ್ದರೂ ಆರೋಪಿಯು ತಪ್ಪಿಸಿಕೊಳ್ಳಲು ನೆರವಾದ ಆರೋಪದ ಮೇಲೆ ಚಾಲಕ ಹಾಗೂ ಆತನ ತಂದೆಯನ್ನು ಬಂಧಿಸಲಾಗಿತ್ತು.
‘ಅಪಘಾತದ ಬಳಿಕ ಆರೋಪಿಯ ನಡೆಯು ನ್ಯಾಯಾಲಯಕ್ಕೆ ಜಾಮೀನು ನೀಡಲು ವಿಶ್ವಾಸ ಮೂಡಿದಂತೆ ಇಲ್ಲ’ ಎಂದು ಕಾರಣ ನೀಡಿ ಬಾಂಬೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.