ADVERTISEMENT

ವರ್ಷದಲ್ಲಿ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳು: ಶಿಕ್ಷಣ ಸಚಿವಾಲಯ

‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ ಸಿದ್ಧ * 11,12ನೇ ತರಗತಿಯಲ್ಲಿ ಎರಡು ಭಾಷೆ ಕಲಿಯಬೇಕು

ಪಿಟಿಐ
Published 23 ಆಗಸ್ಟ್ 2023, 14:08 IST
Last Updated 23 ಆಗಸ್ಟ್ 2023, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ರೂಪಿಸಿರುವ ಹೊಸ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ವರ್ಷದಲ್ಲಿ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಈ ಪರೀಕ್ಷೆಗಳ ಪೈಕಿ, ತಾನು ಪಡೆದ ಅಧಿಕ ಅಂಕಗಳನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಕಲಿಯಬೇಕಿದ್ದು, ಆ ಪೈಕಿ ಒಂದು ಭಾರತೀಯ ಭಾಷೆಯಾಗಿರಬೇಕು ಎಂಬ ಅಂಶವನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌) ಹೊಂದಿದೆ ಎಂದು ಶಿಕ್ಷಣ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

‘ಎನ್‌ಇಪಿ ಅನ್ವಯ ರೂಪಿಸಿರುವ ಈ ಪಠ್ಯಕ್ರಮದ ಆಧಾರದ ಮೇಲೆಯೇ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿಗಳು ಎಷ್ಟು ತಿಂಗಳು ತರಬೇತಿ ಪಡೆದಿದ್ದರು ಮತ್ತು ಕಲಿತಿರುವುದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದರ ಬದಲಾಗಿ ಅವರು, ವಿಷಯಗಳನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಹಾಗೂ ತಮ್ಮ ಸಾಮರ್ಥ್ಯಗಳಿಗೆ ತಕ್ಕಂತೆ ಎಷ್ಟು ಸಾಧನೆ ಮಾಡಿದ್ದಾರೆ ಎಂಬುದರ ಮೌಲ್ಯಮಾಪನಕ್ಕೆ ಈ ಬೋರ್ಡ್‌ ಪರೀಕ್ಷೆಗಳು ನೆರವಾಗಲಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲು ಅನುವಾಗುವಂತೆ ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.  ತಾವು ಉತ್ತಮವಾಗಿ ಓದಿಕೊಂಡಿರುವ ವಿಷಯದ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

‘11 ಮತ್ತು 12ನೇ ತರಗತಿಯಲ್ಲಿ ವಿಷಯಗಳ ಆಯ್ಕೆ ಕುರಿತು ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ’ ಎಂದು ಹೇಳಿದ್ದಾರೆ.

‘ಬರುವ ದಿನಗಳಲ್ಲಿ, ಪರೀಕ್ಷಾ ಮಂಡಳಿಗಳು ಅಗತ್ಯಕ್ಕೆ ತಕ್ಕಂತೆ ಪರೀಕ್ಷೆಗಳನ್ನು ನಡೆಸಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೂ ಮುನ್ನ, ಪ್ರಶ್ನೆಪತ್ರಿಕೆ ರೂಪಿಸುವವರು ಹಾಗೂ ಮೌಲ್ಯಮಾಪಕರು ವಿಶ್ವವಿದ್ಯಾಲಯ ಪ್ರಮಾಣಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಬೇಕು’ ಎಂದು ಎನ್‌ಸಿಎಫ್‌ನಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.