ADVERTISEMENT

ಚಿಲಿಕಾ ಸರೋವರದಲ್ಲಿ ಸಿಲುಕಿದ ಕೇಂದ್ರ ಸಚಿವರಿದ್ದ ದೋಣಿ: ರಕ್ಷಣೆ

ಪಿಟಿಐ
Published 8 ಜನವರಿ 2024, 3:17 IST
Last Updated 8 ಜನವರಿ 2024, 3:17 IST
<div class="paragraphs"><p>ಚಿಲಿಕಾ ಸರೋವರ</p></div>

ಚಿಲಿಕಾ ಸರೋವರ

   

(ಪ್ರಾತಿನಿಧಿಕ ಚಿತ್ರ)

ಭುವನೇಶ್ವರ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಷೋತ್ತಮ್ ರೂಪಾಲಾ ಅವರಿದ್ದ ದೋಣಿ ಒಡಿಶಾದ ಚಿಲಿಕಾ ಸರೋವರದಲ್ಲಿ ಭಾನುವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿತ್ತು.

ADVERTISEMENT

ಮೀನುಗಾರರು ಹಾಕಿದ ಬಲೆಯಲ್ಲಿ ದೋಣಿ ಸಿಲುಕಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಕೇಂದ್ರ ಸಚಿವರು ಸೇರಿದಂತೆ ದೋಣಿಯಲ್ಲಿ ಸಿಲುಕಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಮತ್ತು ಇತರ ಕೆಲವು ಸ್ಥಳೀಯ ಪಕ್ಷದ ಮುಖಂಡರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಗಿದೆ.

ಸಚಿವ ರೂಪಾಲಾ ಅವರು ಖುರ್ದಾ ಜಿಲ್ಲೆಯ ಬಾರ್ಕುಲ್‌ನಿಂದ ಪ್ರಯಾಣ ಆರಂಭಿಸಿ ಬ್ಲೂ ಲಗೂನ್ ಮೂಲಕ ಪುರಿ ಜಿಲ್ಲೆಯ ಸತಪದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಸರೋವರದ ಮಧ್ಯದಲ್ಲಿ, ನಲಬಾನ ಪಕ್ಷಿಧಾಮದ ಬಳಿ, ಯಾಂತ್ರೀಕೃತ ದೋಣಿ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿತು ಎಂದು ಸಚಿವರ ಬೆಂಗಾವಲು ಕರ್ತವ್ಯದಲ್ಲಿ ನಿಯೋಜಿಸಲಾದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕತ್ತಲಾಗಿದ್ದರಿಂದ ದೋಣಿಯನ್ನು ನಡೆಸುತ್ತಿದ್ದ ವ್ಯಕ್ತಿ ಹೊಸ ಮಾರ್ಗದಲ್ಲಿ ಹೋಗಿದ್ದರಿಂದ ನಾವು ದಾರಿ ತಪ್ಪಿದ್ದೆವು. ಸತಪದವನ್ನು ತಲುಪಲು ನಮಗೆ ಸುಮಾರು ಎರಡು ಗಂಟೆ ಬೇಕಾಯಿತು ಎಂದು ತಿಳಿಸಿದರು.

ಪುರಿ ಜಿಲ್ಲೆಯ ಕೃಷ್ಣಪ್ರಸಾದ್ ಪ್ರದೇಶದ ಬಳಿ ಕಾರ್ಯಕ್ರಮವೊಂದರಲ್ಲಿ ರೂಪಾಲಾ ಪಾಲ್ಗೊಳ್ಳಬೇಕಿತ್ತು. ಆದರೆ, ಈ ಘಟನೆಯಿಂದಾಗಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ. ರಾತ್ರಿ 10.30ರ ಸುಮಾರಿಗೆ ಅವರು ಪುರಿಗೆ ತಲುಪಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

11ನೇ ಹಂತದ 'ಸಾಗರ ಪರಿಕ್ರಮ' ಕಾರ್ಯಕ್ರಮದ ಭಾಗವಾಗಿ ಮೀನುಗಾರರೊಂದಿಗೆ ಸಂವಾದ ನಡೆಸಲು ಕೇಂದ್ರ ಸಚಿವರು ಒಡಿಶಾಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಗಂಜಾಂ ಜಿಲ್ಲೆಯ ಗೋಪಾಲಪುರ ಬಂದರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಸೋಮವಾರ(ಜ.8) ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರೊಂದಿಗೆ ರೂಪಾಲಾ ಅವರು ಪಾರಾದೀಪ್ ಮೀನುಗಾರಿಕೆ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.