ADVERTISEMENT

ಬಂಧಿತರು ಕುವೈತ್‌‌ನ ‘ನೊ-ಫ್ಲೈ ಲಿಸ್ಟ್’ನಲ್ಲಿ: ಕೋರ್ಟ್‌ಗೆ ಮುಂಬೈ ಪೊಲೀಸರ ಮಾಹಿತಿ

ಪಿಟಿಐ
Published 10 ಫೆಬ್ರುವರಿ 2024, 13:55 IST
Last Updated 10 ಫೆಬ್ರುವರಿ 2024, 13:55 IST
<div class="paragraphs"><p>ಪಿಟಿಐ ಚಿತ್ರ</p></div>

ಪಿಟಿಐ ಚಿತ್ರ

   

ಮುಂಬೈ: ದೋಣಿಯಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದ್ದ ಮೂವರು ಕುವೈತ್‌ನ ‘ನೋ ಫ್ಲೈ ಲಿಸ್ಟ್’ (ವಿದೇಶ ಪ್ರಯಾಣ ನಿಷಿದ್ಧ ಪಟ್ಟಿ)ನಲ್ಲಿದ್ದಾರೆ ಎಂದು ಮುಂಬೈ ಪೊಲೀಸರು ಶನಿವಾರ ಇಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಕುವೈತ್‌ನಲ್ಲಿರುವ ಕಾನ್ಸುಲೆಟ್‌ನ ಮಾಹಿತಿಯ ಪ್ರಕಾರ, ಆರೋಪಿಗಳು ಮಧ್ಯಪ್ರಾಚ್ಯ ದೇಶದ ‘ನೋ ಫ್ಲೈ ಲಿಸ್ಟ್’ನಲ್ಲಿದ್ದಾರೆ. ಇದನ್ನು ಪರಿಶೀಲಿಸಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅಗತ್ಯವಿದೆ. ದೋಣಿಯ ಜಿಪಿಎಸ್ ಮಾರ್ಗವನ್ನು ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಪಾಸ್‌ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಬಂಧಿಸಿರುವ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಫೆಬ್ರುವರಿ 12ರವರೆಗೆ ವಿಸ್ತರಿಸಿದ್ದಾರೆ.

ಕುವೈತ್‌ನಿಂದ ಪಾಕಿಸ್ತಾನದ ಮೂಲಕ ಸಮುದ್ರ ಮಾರ್ಗವಾಗಿ ದೋಣಿಯಲ್ಲಿ ಭಾರತದ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ್ದ ತಮಿಳುನಾಡು ಮೂಲದ ನಿಟ್ಸೋ ಡಿಟ್ಟೊ (31), ವಿಜಯ್ ವಿನಯ್ ಆಂಥೋನಿ (29), ಜೆ. ಸಹಾಯತ್ತ ಅನೀಶ್ (29) ಅವರನ್ನು ಫೆ.7ರಂದು ಬಂಧಿಸಲಾಗಿತ್ತು.

ಆರೋಪಿಗಳ ಪರ ವಾದಿಸಿದ ವಕೀಲ ಸುನೀಲ್ ಪಾಂಡೆ, ಬಂಧಿತರ ಜತೆಗೆ ಕೆಲಸದ ನಿಮಿತ್ತ ಕುವೈತ್‌ಗೆ ತೆರಳಿದ್ದ ಇತರ ಎಂಟು ಮಂದಿಯನ್ನು ಅಲ್ಲಿ ಉದ್ಯೋಗದಾತರು ಒತ್ತೆಯಾಳಾಗಿ ಇರಿಸಿಕೊಂಡು, ಪಾಸ್‌ಪೋರ್ಟ್‌ ವಶದಲ್ಲಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.