ಸಂಘರ್ಷ ಪೀಡಿತ ಉಕ್ರೇನ್
(ರಾಯಿಟರ್ಸ್ ಚಿತ್ರ)
ಹೈದರಾಬಾದ್: ವಂಚನೆಗೊಳಗಾಗಿ ರಷ್ಯಾ ಸೇನೆಗೆ ಸೇರಿ, ರಷ್ಯಾ - ಉಕ್ರೇನ್ ಸಂಘರ್ಷದಲ್ಲಿ ಮೃತಪಟ್ಟಿದ್ದ ಮೊಹಮ್ಮದ್ ಅಸ್ಫಾನ್ ಪಾರ್ಥಿವ ಶರೀರವನ್ನು ಶನಿವಾರ ಹೈದರಾಬಾದ್‌ಗೆ ಕರೆತರಲಾಗಿದೆ.
ಮೊಹಮ್ಮದ್ ಅಸ್ಫಾನ್ ಅವರ ಪಾರ್ಥಿವ ಶರೀರ ಹೈದರಾಬಾದ್‌ನ ಬಜಾರ್‌ಘಾಟ್‌ನಲ್ಲಿರುವ ಅವರ ನಿವಾಸಕ್ಕೆ ಶನಿವಾರ ತಡರಾತ್ರಿ ತಲುಪಿದೆ ಎಂದು ಎಐಎಂಐಎಂ ಮೂಲಗಳು ತಿಳಿಸಿವೆ.
ಮಾರ್ಚ್ 6 ರಂದು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಸ್ಫಾನ್ ಅವರ ಸಾವನ್ನು ದೃಢಪಡಿಸಿತ್ತು. ಅಲ್ಲದೇ ಹೈದರಾಬಾದ್‌ನಲ್ಲಿರುವ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿತ್ತು.
ಕೆಲಸ ಮಾಡಲೆಂದು ರಷ್ಯಾಗೆ ತೆರಳಿದ ಮೊಹಮ್ಮದ್‌ನನ್ನು ಬಲವಂತವಾಗಿ ಸೇನೆಗೆ ಸೇರಿಸಲಾಗಿದೆ ಎಂದು ಅವರ ಸಹೋದರ ಇಮ್ರಾನ್ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, 'ತೆಲಂಗಾಣದ ಇಬ್ಬರು ಸೇರಿದಂತೆ ಕೆಲವು ಭಾರತೀಯ ಯುವಕರನ್ನು ಉದ್ಯೋಗ ನೀಡುವ ಭರವಸೆ ನೀಡಿ ರಷ್ಯಾಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅವರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದಾರೆ' ಎಂದು ಆರೋಪಿದ್ದರು.
ಅಲ್ಲದೇ ಯುವಕರನ್ನು ಭಾರತಕ್ಕೆ ಕರೆತರಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಓವೈಸಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.