ADVERTISEMENT

ಕೇರಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಚರಂಡಿಯಲ್ಲಿ ಪತ್ತೆ

ಪಿಟಿಐ
Published 15 ಜುಲೈ 2024, 16:07 IST
Last Updated 15 ಜುಲೈ 2024, 16:07 IST
ಕೇರಳದ ಅಮಯಿಳಂಚನ್‌ನಲ್ಲಿ ಶನಿವಾರ ಚರಂಡಿ ಶುಚಿಗೊಳಿಸುವ ವೇಳೆ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ಪೌರ ಕಾರ್ಮಿಕನ ರಕ್ಷಣೆಗಾಗಿ ಅಗ್ನಿಶಾಮಕ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು –ಪಿಟಿಐ ಚಿತ್ರ 
ಕೇರಳದ ಅಮಯಿಳಂಚನ್‌ನಲ್ಲಿ ಶನಿವಾರ ಚರಂಡಿ ಶುಚಿಗೊಳಿಸುವ ವೇಳೆ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ಪೌರ ಕಾರ್ಮಿಕನ ರಕ್ಷಣೆಗಾಗಿ ಅಗ್ನಿಶಾಮಕ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು –ಪಿಟಿಐ ಚಿತ್ರ    

ತಿರುವನಂತಪುರ: ಕಸ ಮತ್ತು ಹೊಲಸು ತುಂಬಿಕೊಂಡಿದ್ದ ಚರಂಡಿ ಶುಚಿಗೊಳಿಸುವ ವೇಳೆ ನಾಪತ್ತೆಯಾಗಿದ್ದ ಪೌರ ಕಾರ್ಮಿಕ ಜಾಯ್ ಅವರ ಮೃತದೇಹವು ಎರಡು ದಿನಗಳ ಬಳಿಕ ಪತ್ತೆಯಾಗಿದೆ ಎಂದು ಕೇರಳ ಸರ್ಕಾರ ಸೋಮವಾರ ತಿಳಿಸಿದೆ. 

ಅಮಯಿಳಂಚನ್ ಚರಂಡಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾದ ಮೃತದೇಹವು ಪೌರ ಕಾರ್ಮಿಕ ಜಾಯ್ (47) ಅವರದ್ದೇ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. 

ಪಳವಂಗಡಿ–ಥಕರಪರಂಬು–ವಂಚಿಯೂರ್ ರಸ್ತೆಯಲ್ಲಿನ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಬಗ್ಗೆ ಪೌರ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಹೊರತೆಗೆದು, ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. 

ADVERTISEMENT

ಶನಿವಾರ ಚರಂಡಿ ಶುಚಿಗೊಳಿಸುತ್ತಿದ್ದ ಜಾಯ್ ಅವರು ನಾಪತ್ತೆಯಾಗಿದ್ದರು. ಅವರ ರಕ್ಷಣೆಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 46 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ರೈಲ್ವೆ ಮೇಲೆ ವಿಪತ್ತು ನಿರ್ವಹಣಾಕಾಯ್ದೆಯಡಿ ಪ್ರಕರಣ

ಕೇರಳ ಕಸ ಮತ್ತು ಕೊಳಕು ತುಂಬಿದ್ದ ಚರಂಡಿ ಶುಚಿಗೊಳಿಸಲು ತಿರುವನಂತಪುರ ನಗರ ಪಾಲಿಕೆಯೊಂದಿಗೆ ದಕ್ಷಿಣ ರೈಲ್ವೆ ವಲಯ ಕೈಜೋಡಿಸದೆ ಇರುವುದರಿಂದಲೇ ಚರಂಡಿಯಲ್ಲಿ ಭಾರಿ ಪ್ರಮಾಣದ ಕಸ ಶೇಖರಣೆಗೆ ಕಾರಣವಾಗಿತ್ತು ಎಂದು ಕೇರಳ ಸರ್ಕಾರ ಆರೋಪಿಸಿದೆ.  ಇದೇ ಚರಂಡಿ ಶುಚಿಗೊಳಿಸುವ ವೇಳೆ ಜುಲೈ 13ರಂದು ಚರಂಡಿಯಲ್ಲಿ ಮುಳಿಗಿದ್ದ ಪೌರಕಾರ್ಮಿಕ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ.  ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ರಾಜೇಶ್ ‘ಅಮಯಿಳಂಜನ್ ಕ್ಯಾನೆಲ್ ಶುಚಿಗೊಳಿಸಲು ಸಹಕಾರ ನೀಡಬೇಕೆಂಬ ಕೋರಿಕೆಗೆ ರೈಲ್ವೆ ಇಲಾಖೆ ಸ್ಪಂದಿಸುವುದಿಲ್ಲ. ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಹಲವು ನೋಟಿಸ್‌ಗಳನ್ನು ನೀಡಿದ ಬಳಿಕ ರೈಲ್ವೆ ಇಲಾಖೆಯು ಕಾರ್ಮಿಕರನ್ನು ಮಾತ್ರ ಕಳುಹಿಸಿಕೊಟ್ಟಿದೆ’ ಎಂದರು. ‘ಮುಂದಿನ ದಿನಗಳಲ್ಲಿ ಸ್ಥಳೀಯ ಆಡಳಿತಕ್ಕೆ ಅಸಹಕಾರ ಧೋರಣೆಯನ್ನು ಮುಂದುವರಿಸಿದ್ದಲ್ಲಿ ರೈಲ್ವೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.