ADVERTISEMENT

ಬೊಫೋರ್ಸ್ ಹಗರಣ: ಅಮೆರಿಕದ ಖಾಸಗಿ ವ್ಯಕ್ತಿಯಿಂದ ಮಾಹಿತಿ ಕೋರಿದ ಸಿಬಿಐ

ಪಿಟಿಐ
Published 5 ಮಾರ್ಚ್ 2025, 13:54 IST
Last Updated 5 ಮಾರ್ಚ್ 2025, 13:54 IST
<div class="paragraphs"><p>ಅಮೆರಿಕ</p></div>

ಅಮೆರಿಕ

   

ನವದೆಹಲಿ: ₹64 ಕೋಟಿ ಮೌಲ್ಯದ ಬೊಫೋರ್ಸ್ ಲಂಚ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಖಾಸಗಿ ತನಿಖಾ ವ್ಯಕ್ತಿ ಮೈಕೆಲ್ ಹರ್ಷ್‌ಮನ್‌ ಅವರಿಂದ ಕೊಡಿಸಬೇಕು ಎಂಬ ಮನವಿಯನ್ನು ಸಿಬಿಐ ಅಧಿಕಾರಿಗಳು ಅಮೆರಿಕದ ಮುಂದೆ ಇರಿಸಿದ್ದಾರೆ.

1980ರ ದಶಕದ ಈ ಹಗರಣಕ್ಕೆ ಸಂಬಂಧಿಸಿದ ಮಹತ್ವದ ಕೆಲವು ಮಾಹಿತಿಯನ್ನು ಭಾರತದ ತನಿಖಾ ಸಂಸ್ಥೆಗಳ ಜೊತೆ ಹಂಚಿಕೊಳ್ಳುವ ಇಂಗಿತವನ್ನು ಹರ್ಷ್‌ಮನ್ ಅವರು ಈ ಹಿಂದೆ ವ್ಯಕ್ತಪಡಿಸಿದ್ದರು. ಹರ್ಷ್‌ಮನ್ ಅವರು ಫೇರ್‌ಫ್ಯಾಕ್ಸ್ ಗ್ರೂಪ್‌ನ ಮುಖ್ಯಸ್ಥ. ಇವರು 2017ರಲ್ಲಿ ಭಾರತದಲ್ಲಿ ನಡೆದ ಖಾಸಗಿ ಪತ್ತೇದಾರರ ಸಮಾವೇಶದಲ್ಲಿ ಭಾಗಿಯಾಗಿದ್ದರು.

ADVERTISEMENT

ಭಾರತದಲ್ಲಿ ಇದ್ದಾಗ ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ಹಗರಣದ ತನಿಖೆಯ ಹಳಿತಪ್ಪಿಸಿತ್ತು ಎಂದು ದೂರಿದ್ದರು.

ವಿದೇಶಗಳಲ್ಲಿ ಇರುವ ಭಾರತೀಯರು ಕರೆನ್ಸಿ ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸಿದ್ದರೆ, ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದರೆ ಅದರ ಬಗ್ಗೆ ತನಿಖೆ ನಡೆಸಲು ಮತ್ತು ಅಂತಹ ಆಸ್ತಿಗಳ ಮೇಲೆ ಕಣ್ಣಿಡಲು ತಮ್ಮನ್ನು ಕೇಂದ್ರ ಹಣಕಾಸು ಸಚಿವಾಲಯವು 1986ರಲ್ಲಿ ನೇಮಿಸಿತ್ತು. ಆ ಪೈಕಿ ಕೆಲವು ಆಸ್ತಿಗಳು ಬೊಫೋರ್ಸ್ ಒಪ್ಪಂದಕ್ಕೆ ಸಂಬಂಧಿಸಿದವು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

ಹರ್ಷ್‌ಮನ್‌ ಅವರನ್ನು ಈ ಕೆಲಸಕ್ಕೆ ಗೊತ್ತುಮಾಡಿದ್ದರ ಬಗ್ಗೆ ಮತ್ತು ಅವರು ಯಾವುದಾದರೂ ವರದಿಯನ್ನು ಸಲ್ಲಿಸಿದ್ದರೆ ಬಗ್ಗೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐ ಅಧಿಕಾರಿಗಳು ಹಣಕಾಸು ಸಚಿವಾಲಯವನ್ನು ಕೋರಿದ್ದರು. ಆದರೆ ಆಗಿನ ದಾಖಲೆಗಳು ಸಿಬಿಐಗೆ ಸಿಕ್ಕಿರಲಿಲ್ಲ.

ಅಮೆರಿಕದ ಅಧಿಕಾರಿಗಳಿಗೆ 2023, 2024ರಲ್ಲಿ ಕಳುಹಿಸಿದ ಮನವಿಗಳಿಗೆ ಸ್ಪಂದನ ದೊರೆತಿರದ ಕಾರಣಕ್ಕೆ ಈಗ ನ್ಯಾಯಾಂಗದ ಮೂಲಕ ಮನವಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.