ADVERTISEMENT

ತಿರುವನಂತಪುರ | ಕಚ್ಚಾ ಬಾಂಬ್ ಸ್ಫೋಟ: ವೃದ್ಧ ಸಾವು

ಸಿಪಿಐ(ಎಂ)ನಿಂದ ಶಾಂತಿ ಕದಡಲು ಯತ್ನ–ಬಿಜೆಪಿ, ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 13:37 IST
Last Updated 19 ಜೂನ್ 2024, 13:37 IST
   

ತಿರುವನಂತಪುರ: ಕಣ್ಣೂರು ಜಿಲ್ಲೆಯ ತಲಶ್ಯೇರಿಯಲ್ಲಿ ಮಂಗಳವಾರ ಕಚ್ಚಾ ಬಾಂಬ್‌ ಸ್ಫೋಟಿಸಿ ವೇಲಾಯುಧನ್‌ (86) ಎಂಬುವವರು ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ವಿರುದ್ಧ ತಿರುಗಿಬಿದ್ದಿರುವ ಬಿಜೆಪಿ ಹಾಗೂ ಕಾಂಗ್ರೆಸ್‌, ಜಿಲ್ಲೆಯಲ್ಲಿರುವ ಶಾಂತಿಯುತ ವಾತಾವರಣ ಕೆಡಿಸಲು ಉದ್ದೇಶಪೂರ್ವಕವಾಗಿಯೇ ಮಾರ್ಕಿಸ್ಟ್‌ ಪಕ್ಷವು ಈ ಸ್ಫೋಟ ಎಸಗಿದ್ದು, ಬಾಂಬ್‌ ಸಂಸ್ಕೃತಿ ಪರಿಚಯಿಸಿದೆ ಎಂದು ಆರೋಪಿಸಿದೆ.

‘ಜನವಸತಿರಹಿತ ಖಾಲಿ ಜಾಗದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದ ವೇಳೆ, ಸ್ಟೀಲ್‌ ಡಬ್ಬಿ ತೆರೆದಾಗ ಬಾಂಬ್‌ ಸ್ಫೋಟಗೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ತಲಶ್ಯೇರಿ ಕೋ–ಆಪರೇಟಿವ್‌ ಆಸ್ಪತ್ರೆಗೆ ದಾಖಲಿಸಿದರೂ ಬದುಕಿ ಉಳಿಯಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ವರದಿ ಪ್ರಕಾರ, ‘ಸ್ಫೋಟಗೊಂಡಿರುವುದು ಕಚ್ಚಾ ಬಾಂಬ್‌ ಆಗಿದೆ’ ಎಂದು ಕಣ್ಣೂರು ಜಿಲ್ಲಾ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಕಾಂಗ್ರೆಸ್‌, ಬಿಜೆಪಿ ಟೀಕೆ: ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌, ‘ಸಿಪಿಎಂ ಹೆಚ್ಚು ಪ್ರಾಬಲ್ಯ ಹೊಂದಿರುವ ಕಣ್ಣೂರಿನಲ್ಲಿ ಅಕ್ರಮ ಕಚ್ಚಾ ಬಾಂಬ್‌ ತಯಾರಿಕಾ ಕೇಂದ್ರಗಳು ಗುಡಿ ಕೈಗಾರಿಕೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಸಿಪಿಎಂ ಹಣ ಪೂರೈಸುತ್ತಿದ್ದು, ಮುಖ್ಯಮಂತ್ರಿಗಳ ಆಶೀರ್ವಾದವೂ ಇದೆ’ ಎಂದು ಆರೋಪಿಸಿದರು.

ಇದಾದ ಬಳಿಕ ವಿರೋಧ ಪಕ್ಷದ ಶಾಸಕರು ಸದನ ಬಹಿಷ್ಕರಿಸಿ ಹೊರನಡೆದರು.

‘ರಾಜ್ಯ ಸರ್ಕಾರದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಕುರಿತು ಕಾರ್ಯಕರ್ತರ ಮಟ್ಟದಲ್ಲಿ ತೀವ್ರ ಅಸಮಾಧಾನವಿದೆ. ಹೀಗಾಗಿ, ಪಕ್ಷದ ಮುಖಂಡರೇ ಇಂತಹ ಕೃತ್ಯವೆಸಗಿರುವ ಸಾಧ್ಯತೆಯ ಬಗ್ಗೆ ನಮಗೂ ಅನುಮಾನವಿದೆ. ಆ ಮೂಲಕ ಕಣ್ಣೂರಿನಲ್ಲಿ ಬಾಂಬ್‌ ಸ್ಫೋಟ, ಹಿಂಸಾಚಾರದ ಹಿಂದಿನ ಸ್ಥಿತಿಯನ್ನು ಮರುಕಳಿಸಲು ಮುಂದಾಗಿದೆ‘ ಎಂದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಆರೋಪಿಸಿದ್ದಾರೆ.

‘ಕಚ್ಚಾ ಬಾಂಬ್ ತಯಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.