ADVERTISEMENT

ಸುಳ್ಳು ಅತ್ಯಾಚಾರ ದೂರು: ಮಹಿಳೆಗೆ ₹ 25 ಸಾವಿರ ದಂಡ ವಿಧಿಸಿದ ಬಾಂಬೆ ಹೈಕೋರ್ಟ್

ಕುಟುಂಬದ ಒತ್ತಡಕ್ಕೆ ಮಣಿದು ಗೆಳೆಯನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದ ಮಹಿಳೆ

ಪಿಟಿಐ
Published 26 ಆಗಸ್ಟ್ 2020, 12:18 IST
Last Updated 26 ಆಗಸ್ಟ್ 2020, 12:18 IST
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್   

ಮುಂಬೈ: ತನ್ನ ಗೆಳೆಯನ ವಿರುದ್ಧ ಸುಳ್ಳು ಅತ್ಯಾಚಾರದ ದೂರು ದಾಖಲಿಸಿದ್ದ ಮಹಿಳೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ₹ 25 ಸಾವಿರ ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ಆರ್‌.ಡಿ. ಧನುಕಾ ಮತ್ತು ವಿ.ಜಿ. ಬಿಶ್ತ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ‘ಸುಳ್ಳು ದೂರು ನೀಡಿದ್ದ ಮಹಿಳೆಯು ಮಹಾರಾಷ್ಟ್ರ ಪೊಲೀಸ್ ಕಲ್ಯಾಣನಿಧಿಗೆ ನಾಲ್ಕು ವಾರದೊಳಗೆ ₹ 25 ಸಾವಿರ ದಂಡ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದೆ.

‘ಒಂದು ವೇಳೆ ಮಹಿಳೆ ದಂಡ ಪಾವತಿಸದಿದ್ದಲ್ಲಿ, ಗೆಳೆಯನ ವಿರುದ್ಧ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗುವುದು’ ಎಂದೂ ಕೋರ್ಟ್ ಹೇಳಿದೆ.

ADVERTISEMENT

ಪಾಲ್ಗರ್ ಜಿಲ್ಲೆಯ ನಾಲಾಸೊಪರಾ ಪೊಲೀಸ್ ಠಾಣೆಯಲ್ಲಿ ಮಾರ್ಚ್ 16ರಂದು ಮಹಿಳೆಯೊಬ್ಬರು ತನ್ನ ಗೆಳೆಯ ಮಾದಕವಸ್ತು ಸೇವಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಜುಲೈ ತಿಂಗಳಲ್ಲಿ ದೂರುದಾರ ಮಹಿಳೆಯು ತನ್ನ ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು, ಗೆಳೆಯನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದೆ. ಹಾಗಾಗಿ, ಎಫ್‌ಐಆರ್ ಅನ್ನು ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾನು ಗೆಳೆಯನೊಂದಿಗೆ ಸಂಬಂಧ ಹೊಂದಿದ್ದೆ. ಈ ವಿಷಯ ತನ್ನ ಕುಟುಂಬಕ್ಕೆ ತಿಳಿಯುತ್ತಿದ್ದಂತೆಯೇ ತಾನೇ ಗೆಳೆಯನ ವಿರುದ್ಧ ಸುಳ್ಳು ಕಥೆ ಕಟ್ಟಿ, ಅತ್ಯಾಚಾರದ ಆರೋಪ ಹೊರಿಸಿದ್ದೆ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದರು.

ಆದರೆ, ಇದನ್ನು ವಿರೋಧಿಸಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಅರುಣಾ ಕಾಮತ್ ಪೈ ಅವರು, ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪ ಪಟ್ಟಿ ಕೂಡ ಸಲ್ಲಿಸಲಿದ್ದಾರೆ ಎಂದು ಪ್ರತಿಪಾದಿಸಿದರು. ಒಂದು ವೇಳೆ ಕೋರ್ಟ್ ಎಫ್‌ಐಆರ್ ರದ್ದುಪಡಿಸಲು ಒಲವು ತೋರಿದಲ್ಲಿ ಮಹಿಳೆಗೆ ಭಾರಿ ಮೊತ್ತದ ದಂಡ ವಿಧಿಸಬೇಕೆಂದು ಮನವಿ ಮಾಡಿದ್ದರು.

ಅರುಣಾ ಅವರ ವಾದವನ್ನು ಅಂಗೀಕರಿಸಿದ ಕೋರ್ಟ್, ‘ನಮ್ಮ ದೃಷ್ಟಿಯಲ್ಲಿ ದೂರುದಾರ ಮಹಿಳೆಯು ಕುಟುಂಬ ಸದಸ್ಯರ ಒತ್ತಡದಿಂದಾಗಿ ಅತ್ಯಾಚಾರ ದೂರು ದಾಖಲಿಸಿರುವ ವಿಚಾರವನ್ನು ಸುಲಭವಾಗಿ ಒಪ್ಪಿಕೊಳ್ಳಲಾಗದು. ಆದರೆ, ಅರ್ಜಿದಾರರು ದೂರನ್ನು ಮುಂದುವರಿಸಲು ಬಯಸದೇ ಇರುವುದರಿಂದ ಆರೋಪಿಯ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಬಯಸುತ್ತೇವೆ. ಆದರೆ, ದೂರುದಾರ ಮಹಿಳೆಯು ಮಹಾರಾಷ್ಟ್ರ ಪೊಲೀಸ್ ಕಲ್ಯಾಣಸಮಿತಿಗೆ ನಾಲ್ಕು ವಾರದೊಳಗೆ ₹ 25 ಸಾವಿರ ದಂಡ ಪಾವತಿಸಬೇಕು’ ಎಂದು ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.