ADVERTISEMENT

ಕೋರ್ಟ್‌ನ ತೆರೆದ ಸಭಾಂಗಣದಲ್ಲಿ ರಾಜೀನಾಮೆ ಪ್ರಕಟಿಸಿದ ನ್ಯಾಯಮೂರ್ತಿ

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 12:44 IST
Last Updated 4 ಆಗಸ್ಟ್ 2023, 12:44 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌    

ಮುಂಬೈ: ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ರೋಹಿತ್ ದೇವ್‌ ಅವರು ನ್ಯಾಯಾಲಯದ ತೆರೆದ ಸಭಾಂಗಣದಲ್ಲಿ ರಾಜೀನಾಮೆ ವಿಷಯವನ್ನು ಪ್ರಕಟಿಸಿ, ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಅವರು ರಾಜೀನಾಮೆ ನೀಡಲು ಏನು ಕಾರಣ ಎಂಬ ಬಗ್ಗೆ ಮಾಹಿತಿ ಇಲ್ಲ.

ಕೋರ್ಟ್‌ ಸಭಾಂಗಣದಲ್ಲಿ ಶುಕ್ರವಾರ ಕಲಾಪ ನಡೆಯುತ್ತಿದ್ದ ವೇಳೆ,‘ನಾನು ಇಲ್ಲಿ ಹಾಜರಿರುವ ಪ್ರತಿಯೊಬ್ಬರ ಕ್ಷಮೆ ಕೋರುತ್ತೇನೆ. ನಾನು ನಿಮ್ಮನ್ನು ಬೈದಿದ್ದೇನೆ. ನೀವು ಸುಧಾರಿಸಬೇಕು ಎಂಬ ಉದ್ದೇಶದಿಂದಲೇ ಹಾಗೆ ಮಾಡಿದ್ದೆ. ನೀವೆಲ್ಲ ನನ್ನ ಕುಟುಂಬದಂತೆ. ಹೀಗಾಗಿ ಯಾರಿಗೂ ನೋವುಂಟು ಮಾಡಲು ಬಯಸುವುದಿಲ್ಲ’ ಎಂದಿದ್ದಾರೆ.

ADVERTISEMENT

‘ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಲು ವಿಷಾದಿಸುತ್ತೇನೆ. ಆತ್ಮಗೌರವಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ನನಗೆ ಆಗದು. ನೀವು ಶ್ರಮವಹಿಸಿ ಕೆಲಸ ಮಾಡಿ’ ಎಂದು ನ್ಯಾಯಮೂರ್ತಿ ದೇವ್‌ ಹೇಳಿದರು ಎನ್ನಲಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದೇನೆ’ ಎಂದೂ ತಿಳಿಸಿದ್ದಾರೆ.

ನಕ್ಸಲರೊಂದಿಗೆ ನಂಟು ಹೊಂದಿದ್ದ ಆರೋಪದಡಿ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಹಾಗೂ ಹೋರಾಟಗಾರ ಜಿ.ಎನ್‌.ಸಾಯಿಬಾಬಾ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ ಆರೋಪಮುಕ್ತಗೊಳಿಸಿತ್ತು. ಈ ಪೀಠದಲ್ಲಿ ನ್ಯಾಯಮೂರ್ತಿ ಅನಿಲ್‌ ಪಾನ್ಸರೆ ಅವರೊಂದಿಗೆ ನ್ಯಾಯಮೂರ್ತಿ ದೇವ್ ಕೂಡ ಇದ್ದರು.

ಸಾಯಿಬಾಬಾ ಅವರನ್ನು 2014ರ ಮೇ 9ರಂದು ಬಂಧಿಸಲಾಗಿತ್ತು.

ನ್ಯಾಯಮೂರ್ತಿ ದೇವ್‌ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2017ರ ಜೂನ್ 5ರಂದು ನೇಮಕಗೊಂಡಿದ್ದರು. ಅವರು 2025ರ ಡಿಸೆಂಬರ್ 4ರಂದು ನಿವೃತ್ತರಾಗಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.