ADVERTISEMENT

ಕಾರ್ಯತಂತ್ರದ ಭಾಗವಾಗಿ ಗಡಿ ಬಿಕ್ಕಟ್ಟು ಸೃಷ್ಟಿಸುತ್ತಿರುವ ಚೀನಾ: ರಾಜನಾಥ್‌ ಸಿಂಗ್

ರಕ್ಷಣಾ ಸಚಿವ ರಾಜನಾಥ್‌‌ ಸಿಂಗ್‌ ಹೇಳಿಕೆ ‌

ಪಿಟಿಐ
Published 12 ಅಕ್ಟೋಬರ್ 2020, 12:40 IST
Last Updated 12 ಅಕ್ಟೋಬರ್ 2020, 12:40 IST
   

ನವದೆಹಲಿ: ಪಾಕಿಸ್ತಾನದ ನಂತರ ಚೀನಾ ಕೂಡಾ ಭಾರತದೊಂದಿಗೆ ಗಡಿ ತಗಾದೆ ತೆಗೆದಿದ್ದು, ಇದು ‘ಕಾಯರ್ತಂತ್ರ’ದ ಭಾಗದಂತೆ ಗೋಚರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೋಮವಾರ ಹೇಳಿದರು.

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ರಾಜನಾಥ್‌ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ. ಗಡಿ ಭಾಗದಲ್ಲಿ ನಿರ್ಮಾಣವಾಗಿರುವ 44 ಸೇತುವೆಗಳನ್ನುಆನ್‌ಲೈನ್‌ ಮುಖಾಂತರ ಉದ್ಘಾಟಿಸಿ ಮಾತನಾಡಿದ ಸಿಂಗ್‌, ‘ಉತ್ತರ ಹಾಗೂ ಪೂರ್ವ ಗಡಿ ಭಾಗದಲ್ಲಿ ನಿರ್ಮಾಣವಾಗಿರುವ ಸ್ಥಿತಿಯ ಬಗ್ಗೆ ಎಲ್ಲರಿಗೂ ಅರಿವಿದೆ. ಮೊದಲು ಪಾಕಿಸ್ತಾನ ನಂತರದಲ್ಲಿ ಇದೀಗ ಚೀನಾ, ‘ಕಾರ್ಯತಂತ್ರ’ದಡಿ ಗಡಿ ಬಿಕ್ಕಟ್ಟನ್ನು ಸೃಷ್ಟಿಸುತ್ತಿರುವಂತಿದೆ. ಈ ಎರಡೂ ರಾಷ್ಟ್ರಗಳ ಜೊತೆ 7 ಸಾವಿರ ಕಿ.ಮೀ ಗಡಿಯನ್ನು ನಾವು ಹಂಚಿಕೊಂಡಿದ್ದು, ಇಲ್ಲಿ ಬಿಕ್ಕಟ್ಟು ಇನ್ನೂ ಮುಂದುವರಿದಿದೆ’ ಎಂದರು.

ಸೇನೆಗೆ ಸಹಕಾರಿ:ಭಾರತೀಯ ಸೇನೆಗೆ ಸಹಕಾರಿಯಾಗುವಂತೆ ಗಡಿ ಭಾಗದ ಲಡಾಖ್‌, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್‌ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಗಡಿ ಭಾಗಕ್ಕೆ ಕ್ಷಿಪ್ರವಾಗಿ ಸೇನೆಯನ್ನು ನಿಯೋಜಿಸಲು ಇವುಗಳು ಸಹಕಾರಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿ ಅರುಣಾಚಲ ಪ್ರದೇಶದಲ್ಲಿ 450 ಮೀ ಉದ್ದದ ನೆಚಿಫು ಸುರಂಗ ಮಾರ್ಗ ನಿರ್ಮಾಣಕ್ಕೆ ಸಿಂಗ್‌ ಶಂಕುಸ್ಥಾಪನೆ ನೆರವೇರಿಸಿದರು. ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಿಆರ್‌ಒ) ಸಾಧನೆಯನ್ನು ಶ್ಲಾಘಿಸಿದ ಸಿಂಗ್‌, ‘ಗಡಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಆರ್‌ಒ ಒತ್ತು ನೀಡಿದೆ. ಏಕಕಾಲದಲ್ಲಿ 44 ಸೇತುವೆಗಳ ಉದ್ಘಾಟನೆ ದಾಖಲೆಯಾಗಿದೆ’ ಎಂದರು.

‘2008ರಿಂದ 2016ರವರೆಗೆ ಬಿಆರ್‌ಒ ವಾರ್ಷಿಕ ಬಜೆಟ್‌ ಗಾತ್ರ ₹3,300 ಕೋಟಿಯಿಂದ ₹4,600 ಕೋಟಿ ಇತ್ತು. 2020–21ರಲ್ಲಿ ಇದು ₹11 ಸಾವಿರಕ್ಕೆ ಹೆಚ್ಚಳವಾಗಿದೆ. ಗಡಿ ಭಾಗದಲ್ಲಿನ ಮೂಲಸೌಕರ್ಯ ಅಭಿವೃದ್ಧಿಯಿಂದ ಜನತೆಯ ಜೊತೆಗೆ ಸೇನಾ ಸಿಬ್ಬಂದಿಯ ನಿಯೋಜನೆಗೂ ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.