ADVERTISEMENT

ಲಾಭಕ್ಕಾಗಿ ಸಾಲ ಪಡೆದವ ‘ಗ್ರಾಹಕ’ ಅಲ್ಲ: ಸುಪ್ರೀಂ ಕೋರ್ಟ್‌

ಸೆಂಟ್ರಲ್ ಬ್ಯಾಂಕ್ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:20 IST
Last Updated 1 ಮಾರ್ಚ್ 2025, 14:20 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬ್ಯಾಂಕ್‌ನಿಂದ ಸಾಲ ಪಡೆದ ಉದ್ದೇಶ ‘ಲಾಭ ಮಾಡಿಕೊಳ್ಳುವುದಕ್ಕೆ’ ಆಗಿದ್ದರೆ ಸಾಲ ಪಡೆದವರನ್ನು ಗ್ರಾಹಕರ ರಕ್ಷಣಾ ಕಾಯ್ದೆಯ ಅಡಿಯಲ್ಲಿ ‘ಗ್ರಾಹಕ’ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ನೀಡಿದ್ದ ಆದೇಶಕ್ಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಿ.ಕೆ. ಮಿಶ್ರಾ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.

ಆ್ಯಡ್ ಬ್ಯೂರೊ ಅಡ್ವರ್ಟೈಸಿಂಗ್ ಪ್ರೈ.ಲಿ. ಕಂಪನಿಯು ಸಾಲ ಪಾವತಿಯಲ್ಲಿ ವಿಫಲವಾಗಿದೆ ಎಂದು ಸಿಬಿಲ್‌ (ಕ್ರೆಡಿಟ್ ಇನ್‌ಫಾರ್ಮೇಷನ್ ಬ್ಯೂರೊ ಆಫ್ ಇಂಡಿಯಾ ಲಿಮಿಟೆಡ್) ಸಂಸ್ಥೆಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ ಎಂಬ ಆರೋಪದ ಕಾರಣಕ್ಕೆ, ಆ ಕಂಪನಿಗೆ ಪರಿಹಾರ ರೂಪದಲ್ಲಿ ₹75 ಲಕ್ಷ ಪಾವತಿಸುವಂತೆ ಆಯೋಗವು ಬ್ಯಾಂಕ್‌ಗೆ ಆದೇಶಿಸಿತ್ತು. ಇದರ ಜೊತೆ ವ್ಯಾಜ್ಯದ ಖರ್ಚುಗಳನ್ನು ಕೂಡ ಪಾವತಿ ಮಾಡಬೇಕು ಎಂದು ಹೇಳಿತ್ತು.

ADVERTISEMENT

ಈ ಪ್ರಕರಣದಲ್ಲಿ ಕಂಪನಿಗೆ ರಜನೀಕಾಂತ್ ಅಭಿನಯದ ಕೊಚಡಯ್ಯನ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಸೆಂಟ್ರಲ್‌ ಬ್ಯಾಂಕ್‌ ಕಡೆಯಿಂದ ₹10 ಕೋಟಿ ಸಾಲ ಮಂಜೂರಾಗಿತ್ತು. ಆದರೆ ಕಂಪನಿಯು ಸಾಲ ಮರುಪಾವತಿಯಲ್ಲಿ ವಿಫಲಗೊಂಡ ನಂತರ, ಸಾಲ ವಸೂಲಾತಿ ನ್ಯಾಯಮಂಡಳಿ ಎದುರು ವ್ಯಾಜ್ಯದ ವಿಚಾರಣೆ ನಡೆಯಿತು. ಕಂಪನಿಯು ಬ್ಯಾಂಕ್‌ಗೆ ಒಂದು ಬಾರಿಯ ಪಾವತಿಯಾಗಿ ₹3.56 ಕೋಟಿ ನೀಡುವುದರೊಂದಿಗೆ ವ್ಯಾಜ್ಯ ಕೊನೆಗೊಂಡಿತ್ತು.

ಒಂದು ಬಾರಿಯ ಪಾವತಿ ಮೂಲಕ ವ್ಯಾಜ್ಯ ಕೊನೆಗೊಂಡಿದ್ದರೂ, ತನ್ನನ್ನು ಈ ಬ್ಯಾಂಕ್‌ ‘ಸುಸ್ತಿದಾರ’ ಎಂದು ಸಿಬಿಲ್‌ಗೆ ತಿಳಿಸಿದೆ ಎಂದು ಕಂಪನಿ ವಾದಿಸಿತ್ತು. ಈ ರೀತಿ ಮಾಡಿದುದರ ಪರಿಣಾಮವಾಗಿ ಕಂಪನಿಯ ಹೆಸರಿಗೆ ಧಕ್ಕೆ ಆಗಿದೆ, ವಹಿವಾಟು ನಷ್ಟ ಉಂಟಾಗಿದೆ ಎಂದು ಅದು ದೂರಿತ್ತು.

ಕಂಪನಿಯು ನಂತರ ಆಯೋಗದ ಮೊರೆ ಹೋಗಿತ್ತು. ಬ್ಯಾಂಕ್‌ ಕಡೆಯಿಂದ ಸೇವೆಯು ಸರಿಯಾಗಿ ಸಿಕ್ಕಿಲ್ಲ ಎಂದು ಹೇಳಿತ್ತು.

ಕಂಪನಿಯ ಅರ್ಜಿಯನ್ನು ಮಾನ್ಯ ಮಾಡಿದ್ದ ಆಯೋಗವು, ಪರಿಹಾರ ನೀಡುವಂತೆ ಬ್ಯಾಂಕ್‌ಗೆ ತಾಕೀತು ಮಾಡಿತ್ತು. ಅಲ್ಲದೆ, ಸಾಲದ ಖಾತೆಗೆ ಬರಬೇಕಿರುವ ಬಾಕಿ ಮೊತ್ತ ಯಾವುದೂ ಇಲ್ಲ ಎಂಬ ಪ್ರಮಾಣಪತ್ರ ನೀಡುವಂತೆಯೂ ಬ್ಯಾಂಕ್‌ಗೆ ಸೂಚನೆ ನೀಡಿತ್ತು.

‘ಪ್ರತಿವಾದಿಯು (ಕಂಪನಿ) ವಾಣಿಜ್ಯ ಉದ್ದೇಶದ ಸಂಸ್ಥೆ ಎಂಬ ಕಾರಣಕ್ಕೇ ಗ್ರಾಹಕ ಎಂಬ ವ್ಯಾಖ್ಯಾನದಿಂದ ಹೊರಗುಳಿಯುವುದಿಲ್ಲ ಎಂಬುದು ನಮ್ಮ ಅರಿವಿನಲ್ಲಿದೆ. ಆದರೆ ಈ ಪ್ರಕರಣದಲ್ಲಿ ಪ್ರತಿವಾದಿಯು ಸಾಲ ಪಡೆದಿದ್ದು ಲಾಭ ಮಾಡಿಕೊಳ್ಳುವ ಚಟುವಟಿಕೆಯಲ್ಲಿ ತೊಡಗಿಸುವುದಕ್ಕಾಗಿ. ಈ ಕಾರಣಕ್ಕಾಗಿ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.