ADVERTISEMENT

ಸೇನೆಯ 6 ಯೋಧರಿಗೆ ಶೌರ್ಯ ಚಕ್ರ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 18:52 IST
Last Updated 14 ಆಗಸ್ಟ್ 2021, 18:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸೇನೆಯ ಆರು ಯೋಧರಿಗೆ ಶೌರ್ಯ ಚಕ್ರ ಪದಕ ಘೋಷಿಸಲಾಗಿದೆ. ಇವರಲ್ಲಿ ಒಬ್ಬರಿಗೆ ಮರಣೋತ್ತರ ಪದಕ ನೀಡಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ತೋರಿದ ಸಾಹಸ ಮತ್ತು ಶೌರ್ಯ ಪರಿಗಣಿಸಿ ಈ ಪದಕ ನೀಡಲಾಗುತ್ತಿದೆ.

ಮೇಜರ್‌ ಅರುಣ್‌ ಕುಮಾರ್‌ ಪಾಂಡೆ, ಮೇಜರ್‌ ರವಿ ಕುಮಾರ್‌ ಚೌಧರಿ, ಕ್ಯಾಪ್ಟನ್‌ ಅಶುತೋಷ್‌ ಕುಮಾರ್‌ (ಮರಣೋತ್ತರ), ಕ್ಯಾಪ್ಟನ್‌ ವಿಕಾಸ್‌ ಖತ್ರಿ, ರೈಫಲ್‌ಮ್ಯಾನ್‌ ಮುಕೇಶ್‌ ಕುಮಾರ್‌ ಮತ್ತು ಸಿಪಾಯಿ ನೀರಜ್‌ ಅಹ್ಲಾವತ್‌ ಅವರಿಗೆ ಶೌರ್ಯ ಚಕ್ರ ಪದಕ ಘೋಷಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ADVERTISEMENT

ಕಳೆದ ವರ್ಷ ಜೂನ್‌ 9 ಮತ್ತು 10ರಂದು ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯ ನೇತೃತ್ವ
ವಹಿಸಿದ್ದ ರಾಷ್ಟ್ರೀಯ ರೈಫಲ್ಸ್‌ನ 44ನೇ ಬೆಟಾಲಿಯನ್‌ನ ಮೇಜರ್‌ ಪಾಂಡೆ, ಅಪಾರ ಧೈರ್ಯ ತೋರಿಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.

ಇದೇ ರೀತಿ, ರಾಷ್ಟ್ರೀಯ ರೈಫಲ್ಸ್‌ನ 55ನೇ ಬೆಟಾಲಿಯನ್‌ನ ಮೇಜರ್‌ ಚೌಧರಿ ಅವರು, ನಾಲ್ಕು ಯಶಸ್ವಿ ಕಾರ್ಯಾಚರಣೆಯ ನೇತೃತ್ವ ವಹಿಸಿ 13 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು.

ಮದ್ರಾಸ್‌ ರೆಜಿಮೆಂಟ್‌ನ 18ನೇ ಬೆಟಾಲಿಯನ್‌ನ ಕ್ಯಾಪ್ಟನ್‌ ಕುಮಾರ್‌ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ನಿಡಲಾಗಿದೆ. ಕಳೆದ ವರ್ಷ ನವೆಂಬರ್‌ 8ರಂದು ನಡೆದ ಕಾರ್ಯಾಚರಣೆಯಲ್ಲಿ ಕುಮಾರ್‌ ಅವರು ತಮ್ಮ ಬ್ಯಾಟಲಿಯನ್‌ನ ಯೋಧರೊಬ್ಬರ ಜೀವ ರಕ್ಷಿಸುವ ಜತೆಗೆ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದರು.

ರಾಷ್ಟ್ರೀಯ ರೈಫಲ್ಸ್‌ನ 16ನೇ ಬೆಟಾಲಿಯನ್‌ನ ಕ್ಯಾಪ್ಟನ್‌ ವಿಕಾಸ್‌ ಖತ್ರಿ ಅವರು, ಕಳೆದ ವರ್ಷ ಡಿಸೆಂಬರ್‌ 12 ಮತ್ತು 13ರ ರಾತ್ರಿ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ನಡೆದ ಅತ್ಯಂತ ಕಠಿಣ ಮತ್ತು ಸವಾಲಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ತೀವ್ರ ಪ್ರತಿರೋಧದ ನಡುವೆಯೂ ಧೈರ್ಯದಿಂದ ದಾಳಿ ನಡೆಸಿ ಒಬ್ಬ ವಿದೇಶಿ ಉಗ್ರನನ್ನು ಹತ್ಯೆ ಮಾಡಿದ್ದರು.

ರಾಷ್ಟ್ರೀಯ ರೈಫಲ್ಸ್‌ನ 9ನೇ ಬೆಟಾಲಿಯನ್‌ನ ರೈಫಲ್‌ಮ್ಯಾನ್‌ ಮುಕೇಶ್‌ ಕುಮಾರ್‌ ಅವರಿಗೆ ಗುಂಡು ತಗುಲಿದ್ದರೂ ಉಗ್ರನೊಬ್ಬನ ಜತೆ ಹೋರಾಟ ನಡೆಸಿ ಹತ್ಯೆ ಮಾಡಿದ್ದರು.

ಕಳೆದ ವರ್ಷ ಜೂನ್‌ 20ರಂದು ಜಮ್ಮು ಮತ್ತು ಕಾಶ್ಮಿರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯ, ಸಾಹಸಕ್ಕಾಗಿ ಸಿಪಾಯಿ ನೀರಜ್‌ ಅಹ್ಲಾವತ್‌ ಅವರಿಗೆ ಶೌರ್ಯ ಚಕ್ರ ಪದಕ ನೀಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಹತ್ಯೆಗೀಡಾಗಿದ್ದ.

ನೌಕಾಪಡೆಯ ಒಬ್ಬರಿಗೆ ಮತ್ತು ಭಾರತೀಯ ವಾಯು ಪಡೆಯ ಇಬ್ಬರಿಗೆ ಹಾಗೂ ಪೊಲೀಸ್‌ ಇಲಾಖೆಯ ಆರು ಮಂದಿಗೂ ಶೌರ್ಯ ಚಕ್ರ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.