ADVERTISEMENT

ಸಿಬಿಐ ವಿಶೇಷ ನಿರ್ದೇಶಕರ ವಿರುದ್ಧ ಲಂಚದ ದೂರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 20:02 IST
Last Updated 21 ಅಕ್ಟೋಬರ್ 2018, 20:02 IST
   

ನವದೆಹಲಿ: ತನ್ನದೇ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ₹3 ಕೋಟಿ ಲಂಚ ಕೇಳಿದ ಆರೋಪದಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಮಾಂಸ ರಫ್ತು ವ್ಯಾಪಾರಿ ಮೊಯಿನ್‌ ಖುರೇಷಿ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸುವುದಕ್ಕಾಗಿ ದುಬೈನ ಮಧ್ಯವರ್ತಿ ಮೂಲಕ ಈ ಲಂಚಕ್ಕೆ ಅವರು ಬೇಡಿಕೆ ಇರಿಸಿದ್ದರು ಎಂದು ಹೇಳಲಾಗಿದೆ.

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ಅಸ್ತಾನಾ ನಡುವಣ ಸಂಘರ್ಷ ತೀವ್ರಗೊಂಡದ್ದರ ಪರಿಣಾಮವಾಗಿ ಈ ದೂರು ದಾಖಲಾಗಿದೆ ಎಂದೂ ಹೇಳಲಾಗುತ್ತಿದೆ. ಅಸ್ತಾನಾ ಅವರ ವಿರುದ್ಧದ ಆರು ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಸಿಬಿಐ ಇತ್ತೀಚೆಗೆ ಹೇಳಿತ್ತು. ಅಸ್ತಾನಾ ಸಿಬಿಐ ನಿರ್ದೇಶಕರ ನಂತರ ಆ ಸಂಸ್ಥೆಯ ಅತ್ಯಂತ ಹಿರಿಯ ಅಧಿಕಾರಿ.

ಲಂಚ ಪ್ರಕರಣಕ್ಕೆ ಸಂಬಂಧಿಸಿ ಮನೋಜ್‌ ಎಂಬ ಮಧ್ಯವರ್ತಿಯನ್ನು ಸಿಬಿಐ ಅಧಿಕಾರಿಗಳು ಕಳೆದ ವಾರ ಬಂಧಿಸಿದ್ದರು. ಅದಾದ ಬಳಿಕ ಅಸ್ತಾನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗುಪ್ತಚರ ಸಂಸ್ಥೆ ‘ರಾ’ದ (ರಿಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ಎರಡನೇ ಅತ್ಯಂತ ಹಿರಿಯ ಅಧಿಕಾರಿ ಸಮಂತ್‌ ಕುಮಾರ್‌ ಗೋಯಲ್‌ ಅವರ ಹೆಸರೂ ಎಫ್‌ಐಆರ್‌ ನಲ್ಲಿ ಇದೆ. ಹಣ ಪಡೆದುಕೊಳ್ಳಲು ಸಮಂತ್‌ ನೆರವಾಗಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಅಸ್ತಾನಾ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಸಿಬಿಐ ನಿರಾಕರಿಸಿಯೂ ಇಲ್ಲ, ದೃಢಪಡಿಸಿಯೂ ಇಲ್ಲ. ಆದರೆ, ಈ ಸುದ್ದಿ ಶನಿವಾರದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಪತ್ರಿಕೆಗಳಲ್ಲಿಯೂ ಈ ಸುದ್ದಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.