ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಬ್ರೆಜಿಲ್‌ನಲ್ಲಿ ನಡೆದ ‘ಬ್ರಿಕ್ಸ್’ ಸಂಸದೀಯ ವೇದಿಕೆಯ ಸಭೆಯಲ್ಲಿ ಭಾಗಿಯಾಗಿದ್ದರು
– ಪಿಟಿಐ ಚಿತ್ರ
ನವದೆಹಲಿ: ಚೀನಾ ಮತ್ತು ಇರಾನ್ ಅನ್ನು ಒಳಗೊಂಡಿರುವ ‘ಬ್ರಿಕ್ಸ್’ ಸಂಸದೀಯ ವೇದಿಕೆಯು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದೆ ಮತ್ತು ಭಯೋತ್ಪಾದನೆಯನ್ನು ವಿರುದ್ಧ ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೇತೃತ್ವದ ಭಾರತೀಯ ಸಂಸದೀಯ ನಿಯೋಗವು ಬ್ರೆಸಿಲಿಯಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗಿಯಾಗಿದೆ. ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವನ್ನು ಕಡಿತಗೊಳಿಸುವುದು, ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವುದು, ಆಧುನಿಕ ತಂತ್ರಜ್ಞಾನಗಳ ದುರ್ಬಳಕೆಯನ್ನು ನಿಯಂತ್ರಿಸುವುದು, ಕಾನೂನು ಪ್ರಕ್ರಿಯೆಗೆ ಸಹಕರಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಭಾರತದ ನಿಯೋಗವು ಬಲವಾಗಿ ಪ್ರತಿಪಾದಿಸಿದೆ.
ಹಲವು ಸುತ್ತಿನ ಮಾತುಕತೆಯ ಬಳಿಕ ಸದಸ್ಯ ರಾಷ್ಟ್ರಗಳು ಪಹಲ್ಗಾಮ್ ದಾಳಿಯನ್ನು ಖಂಡಿಸಿದವು ಮತ್ತು ಭಯೋತ್ಪಾದನೆ ನಿಗ್ರಹದ ಅಗತ್ಯತೆ ಬಗ್ಗೆ ಒತ್ತಿ ಹೇಳಿದವು.
ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ಪ್ರತಿನಿಧಿಗಳು ಭಾಗಿಯಾಗಿದ್ದರು.
‘ನಿಯೋಗಗಳು ಸಾಧಿಸಿದ್ದೇನು?’
ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯು ‘ಭಾರಿ ವೈಫಲ್ಯ’ ಕಂಡಿದೆ ಎಂದು ಕಾಂಗ್ರೆಸ್ ಶುಕ್ರವಾರ ಟೀಕಿಸಿದೆ.
‘ಸರ್ವಪಕ್ಷಗಳ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸುವ ಮೂಲಕ ಸರ್ಕಾರ ಸಾಧಿಸಿದ್ದಾದರು ಏನು? ಈ ನಡೆಯಿಂದ ದೇಶಕ್ಕಾಗಿರುವ ಲಾಭವೇನು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಮೋದಿ ನೇತೃತ್ವದ ಸರ್ಕಾರ ಅನುಸರಿಸುತ್ತಿರುವ ‘ವಿಫಲ ವಿದೇಶಾಂಗ ನೀತಿ’ ಫಲವಾಗಿ ಜಾಗತಿಕ ಮಟ್ಟದಲ್ಲಿ ಭಾರತ ಅವಮಾನಕ್ಕೆ ಒಳಗಾಗಿದೆ’ ಎಂದೂ ಆರೋಪಿಸಿದೆ.
‘ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಕೆನಡಾ ಆಹ್ವಾನ ನೀಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟ ಕದನ ವಿರಾಮದ ಶ್ರೇಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ಏಕಾಂಗಿಯಾಗಿದೆ. ನಮ್ಮ ಮಿತ್ರ ದೇಶಗಳು ಕೂಡ ನಮ್ಮಿಂದ ದೂರವಾಗುತ್ತಿವೆ’ ಎಂದು ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.