ADVERTISEMENT

‘ಮದುವೆಯಾಗಲು ಸಿದ್ಧರಿದ್ದೀರಾ’:ಆರೋಪಿಗೆ ಕೇಳಿದ ಮಾತು ಹಿಂಪಡೆಯಿರಿ: ಬೃಂದಾ ಕಾರಟ್

ಪಿಟಿಐ
Published 2 ಮಾರ್ಚ್ 2021, 17:05 IST
Last Updated 2 ಮಾರ್ಚ್ 2021, 17:05 IST
ಬೃಂದಾ ಕಾರಟ್: ಟ್ವಿಟ್ಟರ್ ಸಿಪಿಐ(ಎಂ) ಸ್ಪೀಕ್ ಚಿತ್ರ
ಬೃಂದಾ ಕಾರಟ್: ಟ್ವಿಟ್ಟರ್ ಸಿಪಿಐ(ಎಂ) ಸ್ಪೀಕ್ ಚಿತ್ರ   

ನವದೆಹಲಿ: ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಸಂತ್ರಸ್ತೆಯನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಅತ್ಯಾಚಾರ ಆರೋಪಿಯನ್ನು ಕೇಳಿದ ಹೇಳಿಕೆ ಹಿಂಪಡೆಯುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರಿಗೆ ಸಿಪಿಐ(ಎಂ) ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಪತ್ರ ಬರೆದಿದ್ದಾರೆ.

ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರರೊಬ್ಬರು ಬಾಂಬೆ ಹೈಕೋರ್ಟ್ ಫೆಬ್ರವರಿ 5 ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ ಮಾತನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ.

ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನು ನೀಡುವಲ್ಲಿ ಈ ಪ್ರಶ್ನೆಗಳು, ಮಾತುಗಳು ಮತ್ತು ಕ್ರಮಗಳು ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂದು ಎಡಪಕ್ಷದ ನಾಯಕಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ದಯವಿಟ್ಟು ಈ ಮಾತುಗಳು ಮತ್ತು ಪ್ರಶ್ನೆಗಳನ್ನು ಮರುಪರಿಶೀಲಿಸಿ ಮತ್ತು ಹಿಂತೆಗೆದುಕೊಳ್ಳಿ ... ಆರೋಪಿಗೆೆ ಜಾಮೀನು ನೀಡಿದ ಕೆಳ ನ್ಯಾಯಾಲಯದ ಕ್ರಮ 'ದೌರ್ಜನ್ಯ' ಎಂಬ ಔರಂಗಾಬಾದ್ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿರಿ’ ಎಂದು ಮನವಿ ಮಾಡಿದ್ದಾರೆ.

ಸೋಮವಾರ ಅತ್ಯಾಚಾರ ಆರೋಪಿಯ ಅರ್ಜಿ ವಿಚಾರಣೆ ಆರಂಭವಾದಾಗ, ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು "ನೀವು ಸಂತ್ರಸ್ಥೆಯನ್ನು ಮದುವೆಯಾಗಲು ಸಿದ್ಧರಿದ್ದೀರಾ?" ಎಂದು ಆರೋಪಿಯನ್ನು ಪ್ರಶ್ನೆ ಮಾಡಿತ್ತು.

"ನೀವು ಅವರನ್ನು ಮದುವೆಯಾಗಲು ಸಿದ್ಧರಿದ್ದರೆ ನಾವು ಅದನ್ನು ಪರಿಗಣಿಸಬಹುದು, ಇಲ್ಲದಿದ್ದರೆ ನೀವು ಜೈಲಿಗೆ ಹೋಗುತ್ತೀರಿ" ಎಂದ ನ್ಯಾಯಪೀಠವು "ನಾವು ನಿಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿಲ್ಲ" ಎಂದು ಹೇಳಿತ್ತು.

ಅರ್ಜಿದಾರರ ಪರ ಹಾಜರಾದ ವಕೀಲರು, ಆರೋಪಿಯು ಮೊದಲಿಗೆ ಬಾಲಕಿಯನ್ನು ಮದುವೆಯಾಗಲು ಸಿದ್ಧರಿದ್ದರು. ಆದರೆ ಅವರು ನಿರಾಕರಿಸಿದ್ದರಿಂದ ಬೇರೊಬ್ಬರನ್ನು ಮದುವೆಯಾಗಿದ್ದಾರೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.