ರಾಹುಲ್ ಗಾಂಧಿ ಹಾಗೂ ರೇವಂತ ರೆಡ್ಡಿ
ಪಿಟಿಐ ಚಿತ್ರ
ಹೈದರಾಬಾದ್: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹೆಸರು ಇರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅವರು ಶನಿವಾರ ಆಗ್ರಹಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇ.ಡಿಯ ಆರೋಪ ಪಟ್ಟಿಯಲ್ಲಿ ರೇವಂತ ರೆಡ್ಡಿ ಅವರ ಹೆಸರನ್ನು ಉಲ್ಲೇಖಿಸಿರುವುದು ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೌರವಕ್ಕೆ ಧಕ್ಕೆ ತಂದಿದೆ. ರೇವಂತ ರೆಡ್ಡಿ ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಕು ಅಥವಾ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವೇ ಅವರಿಂದ ರಾಜೀನಾಮೆ ಕೊಡಿಸಬೇಕು‘ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಜಿಷ್ಣು ದೇವ ಶರ್ಮಾ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏಕೆ ಮೌನವಾಗಿದ್ದಾರೆ? ರಾಜ್ಯ ಬಿಜೆಪಿ ನಾಯಕರೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಭ್ರಷ್ಟಾಚಾರದ ಆರೋಪದ ನಡುವೆಯೂ ಕೇಂದ್ರ ಸರ್ಕಾರವು ರೇವಂತ ಅವರನ್ನು ರಕ್ಷಿಸುತ್ತಿದೆ’ ಎಂದು ರಾಮರಾವ್ ಆರೋಪಿಸಿದರು.
ಪಕ್ಷದ ಹಿರಿಯ ನಾಯಕರ ಸೂಚನೆ ಮೇರೆಗೆ ಯಂಗ್ ಇಂಡಿಯನ್ ಹಾಗೂ ಎಜೆಎಲ್‌ಗೆ ಹಣ ದೇಣಿಗೆ ನೀಡಿದವರಲ್ಲಿ ಕಾಂಗ್ರೆಸ್ ನಾಯಕರೂ ಸೇರಿದ್ದಾರೆ. ದೇಣಿಗೆ ನೀಡದಿದ್ದರೆ ಅವರ ವ್ಯವಹಾರ ಮತ್ತು ರಾಜಕೀಯ ಜೀವನಕ್ಕೆ ತೊಂದರೆಯಾಗುತ್ತಿತ್ತು ಎಂದು ಇ.ಡಿಯು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಏ.9ರಂದು ಇ.ಡಿಯು ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಇನ್ನೂ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.