ADVERTISEMENT

BL ಸಂತೋಷ್ ಹೆಸರು ಕೇಳಿ ಬಂದಿದ್ದ ತೆಲಂಗಾಣ ಶಾಸಕರ ಖರೀದಿ ಪ್ರಕರಣ ಸಿಬಿಐಗೆ ವರ್ಗ

ಎಸ್‌ಐಟಿ ರದ್ದು–ತೆಲಂಗಾಣ ಹೈಕೋರ್ಟ್ ಆದೇಶ; ರಾಜ್ಯ ಸರ್ಕಾರಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 16:01 IST
Last Updated 26 ಡಿಸೆಂಬರ್ 2022, 16:01 IST
BL ಸಂತೋಷ್
BL ಸಂತೋಷ್   

ಹೈದರಾಬಾದ್: ಬಿಆರ್‌ಎಸ್ ಪಕ್ಷದ ಶಾಸಕರ ಖರೀದಿ ಯತ್ನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ತೆಲಂಗಾಣ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಪ್ರಕರಣದ ತನಿಖೆಗಾಗಿ ತೆಲಂಗಾಣ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಹೈಕೋರ್ಟ್ ರದ್ದುಪಡಿಸಿದೆ.

ಇದರಿಂದಾಗಿ ತೆಲಂಗಾಣ ಸರ್ಕಾರ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಹಿನ್ನಡೆಯಾಗಿದೆ.ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೆಲಂಗಾಣ ನಿರ್ಧರಿಸಿದೆ.

ನಿಷ್ಪಕ್ಷಪಾತ ತನಿಖೆ ದೃಷ್ಟಿಯಿಂದ ಸಿಬಿಐ ಅಥವಾ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸುವಂತೆ ಕೋರಿಮೂವರು ಆರೋಪಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ADVERTISEMENT

ಬಿಆರ್‌ಎಸ್ಶಾಸಕ ರೋಹಿತ್ ರೆಡ್ಡಿ ಅವರು ಶಾಸಕರ ಖರೀದಿ ಯತ್ನದ ಕುರಿತು ದೂರು ನೀಡಿದ್ದರು. ಬಿಜೆಪಿ ಸೇರುವಂತೆ ಆಡಳಿತಾರೂಢ ಬಿಆರ್‌ಎಸ್‌ನ ನಾಲ್ವರು ಶಾಸಕರನ್ನು ಸಂಪರ್ಕಿಸಿದ್ದರು ಎಂಬ ಆರೋಪದ ಮೇಲೆದೆಹಲಿಯ ರಾಮಚಂದ್ರ ಭಾರತಿ, ಹೈದರಾಬಾದ್‌ನ ನಂದು ಕುಮಾರ್ ಮತ್ತು ತಿರುಪತಿಯ ಸಿಂಹಯಾಜಿ ಸ್ವಾಮಿ ಎಂಬುವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರು.ಹೈಕೋರ್ಟ್ ಇವರಿಗೆ ಇತ್ತೀಚೆಗೆ ಜಾಮೀನು ನೀಡಿದೆ.

ಬಿಆರ್‌ಎಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದರೆ, ₹100 ಕೋಟಿ ನೀಡುವುದಾಗಿ ತಮಗೆ ಆಮಿಷ ಒಡ್ಡಲಾಗಿತ್ತು ಎಂದು ರೋಹಿತ್ ರೆಡ್ಡಿ ಅವರು ಆರೋಪಿಸಿದ್ದರು. ಇನ್ನಷ್ಟು ಶಾಸಕರನ್ನು ಬಿಜೆಪಿಗೆ ಕರೆತಂದರೆ ಅವರಿಗೆ ತಲಾ ₹50 ಕೋಟಿ ನೀಡುವುದಾಗಿ ಆರೋಪಿಗಳು ತಮ್ಮ ಮುಂದೆ ಪ್ರಸ್ತಾಪ ಇಟ್ಟಿದ್ದರು ಎಂದು ರೋಹಿತ್ ಹೇಳಿದ್ದರು. ಶಾಸಕರ ಖರೀದಿ ಯತ್ನಕ್ಕೆ ಸಂಬಂಧಿಸಿದ ವಿಡಿಯೊ–ಆಡಿಯೊ ಪುರಾವೆಗಳನ್ನುಚಂದ್ರಶೇಖರ ರಾವ್ ಅವರುಸುದ್ದಿಗೋಷ್ಠಿಯಯಲ್ಲಿ ಬಹಿರಂಗಪಡಿಸಿದ್ದರು. ತಮ್ಮ ಸರ್ಕಾರವನ್ನು ಕೆಡವಲು ಬಿಜೆಪಿ ಸಂಚು ರೂಪಿಸಿದೆ ಎಂದು ಅವರು ಆರೋಪಿಸಿದ್ದರು.

ಈ ಬಗ್ಗೆ ತನಿಖೆ ನಡೆಸಲು ಆಡಳಿತಾರೂಢ ಬಿಆರ್‌ಎಸ್ ಸರ್ಕಾರವು ನ.9ರಂದು 9 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಬಿಜೆಪಿ ಸ್ವಾಗತ

ಈ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಕೇಳಿಬಂದಿತ್ತು. ವಿಚಾರಣೆಗೆ ಒಳಪಡಿಸಲು ಸಂತೋಷ್ ಅವರಿಗೆ ಎಸ್‌ಟಿಐ ಇತ್ತೀಚೆಗೆ ಸಮನ್ಸ್ ನೀಡಿತ್ತು.

ಪ್ರಕರಣದಲ್ಲಿ ಅನಗತ್ಯವಾಗಿ ಪಕ್ಷದ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ತಾಂತ್ರಿಕ ಕಾರಣಗಳಿಂದ ವಜಾಗೊಳಿಸಿದ ಹೈಕೋರ್ಟ್, ಆರೋಪಿಗಳ ರಿಟ್ ಅರ್ಜಿಗಳ ಅಧಾರದಲ್ಲಿ ಪ್ರಕರಣವನ್ನು ವರ್ಗಾಯಿಸಲು ನಿರ್ಧರಿಸಿತು.

ಹೈಕೋರ್ಟ್‌ನ ಈ ಆದೇಶವನ್ನು ಇಡೀ ತೆಲಂಗಾಣ ಸ್ವಾಗತಿಸುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ರಾಮಚಂದ್ರ ರಾವ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.