ADVERTISEMENT

ಬಿಎಸ್‌ಎಫ್‌ನ ‘ಸ್ಕೂಲ್‌ ಆಫ್‌ ಡ್ರೋನ್‌ ವಾರ್‌ಫೇರ್‌’ ಲೋಕಾರ್ಪಣೆ

ಆಧುನಿಕ ಯುದ್ಧ ತಂತ್ರಕ್ಕೆ ಯೋಧರ ಸಜ್ಜುಗೊಳಿಸುವ ಉದ್ದೇಶ 

ಪಿಟಿಐ
Published 3 ಸೆಪ್ಟೆಂಬರ್ 2025, 15:31 IST
Last Updated 3 ಸೆಪ್ಟೆಂಬರ್ 2025, 15:31 IST
...
...   

ನವದೆಹಲಿ: ಆಧುನಿಕ ಯುದ್ಧ ಸ್ವರೂಪಗಳಿಗೆ ತಕ್ಕಂತೆ ಯೋಧರನ್ನು ಹುರಿಗೊಳಿಸಿ, ನೈಪುಣ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ‘ಸ್ಕೂಲ್‌ ಆಫ್‌ ಡ್ರೋನ್‌ ವಾರ್‌ಫೇರ್‌’ ಎಂಬ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ.

ಬಿಎಸ್‌ಎಫ್‌ನ ಮಹಾನಿರ್ದೇಶಕರಾಗಿರುವ ದಲ್ಜಿತ್‌ ಸಿಂಗ್‌ ಚೌಧರಿ ಅವರು ಮಧ್ಯಪ್ರದೇಶದ ತೆಕಾನ್ಪುರದಲ್ಲಿನ ಆಫೀಸರ್ಸ್‌ ಟ್ರೈನಿಂಗ್ ಅಕಾಡೆಮಿಯಲ್ಲಿ ಈ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಲಿದ್ದಾರೆ.

‘ಡ್ರೋನ್‌ ಕಮಾಂಡೋಸ್‌’ ಮತ್ತು ‘ಡ್ರೋನ್‌ ವಾರಿಯರ್ಸ್‌’ ಎಂಬ ವಿಶೇಷ ತಂಡಗಳಿಗೆ ಈ ಕೇಂದ್ರದಲ್ಲಿ ತರಬೇತಿ ನೀಡಿ, ‘ಆಪರೇಷನ್‌ ಸಿಂಧೂರ’ ರೀತಿಯ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಈ ವಿಶೇಷ ಪಡೆಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಬಿಎಸ್‌ಎಫ್‌ ವಕ್ತಾರರೊಬ್ಬರು ತಿಳಿಸಿದ್ದಾರೆ. 

ADVERTISEMENT

‘ಆಪರೇಷನ್‌ ಸಿಂಧೂರ’ದ ಬಳಿಕ ಆಧುನಿಕ ಯುದ್ಧ ನೀತಿಯನ್ನು ಅಳವಡಿಸಿಕೊಳ್ಳಲು 2.65 ಲಕ್ಷ ಮಂದಿಯನ್ನೊಳಗೊಂಡ ಪಡೆಯು ‘ಡ್ರೋನ್‌ ಸ್ಕ್ವಾಡ್ರನ್‌’ ರಚನೆಗೆ ಮುಂದಾಗಿದೆ ಎಂದು ಪಿಟಿಐ ಈ ಹಿಂದೆ ವರದಿ ಮಾಡಿತ್ತು. ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತರಬೇತಿ ಕೇಂದ್ರದ ವೈಶಿಷ್ಟ್ಯ: ಮಾನವರಹಿತ ವೈಮಾನಿಕ ವಾಹನಗಳ (ಯುಎವಿ) ಕಾರ್ಯಾಚರಣೆ, ಡ್ರೋನ್‌ ನಿಗ್ರಹ ವ್ಯವಸ್ಥೆ, ಕಣ್ಗಾವಲು ಹಾಗೂ ಗುಪ್ತಚರ ಮಾಹಿತಿ ಸಂಗ್ರಹ ಸೇರಿದಂತೆ ಒಟ್ಟು 5 ವಿಶೇಷ ಕೋರ್ಸ್‌ಗಳ ಮೂಲಕ ಡ್ರೋನ್‌ ಕಮಾಂಡೋಗಳು ಹಾಗೂ ಡ್ರೋನ್‌ ವಾರಿಯರ್‌ಗಳಿಗೆ ಈ ಕೇಂದ್ರದಲ್ಲಿ ತರಬೇತಿ ನೀಡಲಾ‌ಗುತ್ತದೆ. 

ಡ್ರೋನ್‌ ಹಾರಾಟ ವಲಯ, ರಾತ್ರಿ ಕಾರ್ಯಾಚರಣೆ ಹಾಗೂ ಯುಎವಿಗಳಿಗೆ ಪೆಲೋಡ್‌ಗಳ ಅಳವಡಿಕೆಗೆ ಪ್ರತ್ಯೇಕ ಘಟಕವನ್ನು ತರಬೇತಿ ಕೇಂದ್ರ ಹೊಂದಿದೆ. ರೆಡಿಯೊ ಫ್ರೀಕ್ವೆನ್ಸಿ ಜಾಮರ್‌ಗಳ ಸಲಕರಣೆಗಳು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಲಕರಣೆಗಳೂ ತರಬೇತಿ ಕೇಂದ್ರದಲ್ಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.