ಬಿಎಸ್‌ಎಫ್
ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಗಡಿಯಲ್ಲಿ ಎರಡು ಮುಂಚೂಣಿ ಕೇಂದ್ರ ಸ್ಥಾನಗಳನ್ನು ಸ್ಥಾಪಿಸಲು ಗಡಿ ನಿಯಂತ್ರಣ ಪಡೆ (ಬಿಎಸ್‌ಎಫ್) ತಯಾರಿ ನಡೆಸಿದೆ. ಜೊತೆಗೆ, ಇನ್ನೂ ಹೆಚ್ಚಿನ 16 ಬೆಟಾಲಿಯನ್‌ಗಳನ್ನು ರೂಪಿಸುವ ಸಿದ್ಧತೆ ನಡೆದಿದ್ದು, ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಬಿಎಸ್‌ಎಫ್ ಕಾಯುತ್ತಿದೆ.
ಮುಂಚೂಣಿ ಕೇಂದ್ರ ಸ್ಥಾನ ಮತ್ತು 16 ಬೆಟಾಲಿಯನ್ ರೂಪಿಸಲು ಕೇಂದ್ರ ಸರ್ಕಾರದಿಂದ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಆದರೆ, ಹಣಕಾಸು ಸಚಿವಾಲಯದಿಂದ ಅಂತಿಮ ಒಪ್ಪಿಗೆ ಬರಬೇಕಿದೆ. ಇದು ಕೂಡ ಆದಷ್ಟು ಬೇಗ ಆಗಲಿದೆ ಎಂದು ಮೂಲಗಳು ಹೇಳಿವೆ. ಮುಂದಿನ 5–6 ವರ್ಷಗಳಲ್ಲಿ ನೂತನ ಬೆಟಾಲಿಯನ್‌ಗಳು ಕಾರ್ಯನಿರ್ವಹಿಸಲಿವೆ.
ಜಮ್ಮು, ಪಂಜಾಬ್ ಸೇರಿ ಭಾರತ–ಪಾಕಿಸ್ತಾನ ಗಡಿಯ ಉದ್ದಕ್ಕೂ ಈಗಾಗಲೇ ಹಲವು ವಲಯಗಳಿವೆ. ಬಾಂಗ್ಲಾದೇಶದ ಗಡಿ ಉದ್ದಕ್ಕೂ ಅಸ್ಸಾಂ ಹಾಗೂ ಮಣಿಪುರದಲ್ಲಿ ವಲಯಗಳಿವೆ. ಆದರೆ, ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಮತ್ತು ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಮುಂಚೂಣಿ ಕೇಂದ್ರ ಸ್ಥಾನವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಮುಂಚೂಣಿ ಕೇಂದ್ರ ಸ್ಥಾನಗಳ ಸ್ಥಾಪನೆಗೆ ಒಂದು ವೇಳೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದರೆ ಇದೊಂದು ಶಕ್ತಿಯುತವಾದ, ಸಕಾರಾತ್ಮಕ ಕ್ರಮವಾಗಲಿದೆ. ಕೇಂದ್ರ ಸ್ಥಾನಗಳ ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯವು ಒಪ್ಪಿಗೆ ನೀಡಿದೆ.
ಭಾರತ–ಜಪಾನ್ ಮಾತುಕತೆ: ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಜಪಾನ್ ರಕ್ಷಣಾ ಸಚಿವ ಗೆನ್ ನಾಕಟಾನಿ ಅವರು ಸೋಮವಾರ ಮಾತುಕತೆ ನಡೆಸಲಿದ್ದಾರೆ. ಪೆಹಲ್ಗಾಮ್ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉಂಟಾಗಿರುವ ಉದ್ವಿಗ್ನ ಸ್ಥಿತಿ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ಆಕ್ರಮಣಕಾರಿ ವರ್ತನೆ ತೋರುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಯು ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.