ADVERTISEMENT

ಪಾಕ್ ವಶದಲ್ಲಿರುವ BSF ಯೋಧನ ಬಗ್ಗೆ ಮಾಹಿತಿ ಇಲ್ಲ: ಫಿರೋಜ್‌ಪುರಕ್ಕೆ ಪತ್ನಿ

ಪಿಟಿಐ
Published 28 ಏಪ್ರಿಲ್ 2025, 7:34 IST
Last Updated 28 ಏಪ್ರಿಲ್ 2025, 7:34 IST
ಬಿಎಸ್‌ಎಫ್
ಬಿಎಸ್‌ಎಫ್   

(ಸಾಂದರ್ಭಿಕ ಚಿತ್ರ)

ಕೋಲ್ಕತ್ತ: ಆಕಸ್ಮಿಕವಾಗಿ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ ದಾಟಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ಪೂರ್ಣಂ ಸಾಹು ಅವರನ್ನು ಪಾಕಿಸ್ತಾನದ ರೇಂಜರ್ಸ್ (ಸೇನೆ) ವಶಕ್ಕೆ ಪಡೆದಿತ್ತು. ಈಗ ಪತಿಯ ಬಿಡುಗಡೆ ಸಂಬಂಧ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಲುವಾಗಿ ಬಿಎಸ್‌ಎಫ್ ಯೋಧನ ಪತ್ನಿ ರಜನಿ ಪಂಜಾಬ್‌ನ ಗಡಿ ಪ್ರದೇಶವಾದ ಫಿರೋಜ್‌ಪುರಕ್ಕೆ ಪಯಣ ಬೆಳೆಸಿದ್ದಾರೆ.

'ಒಂದು ವೇಳೆ ನನ್ನ ಪ್ರಶ್ನೆಗಳಿಗೆ ಬಿಎಸ್‌ಎಫ್‌ನಿಂದ ತೃಪ್ತಿದಾಯಕ ಉತ್ತರ ಸಿಗದಿದ್ದರೆ ಫಿರೋಜ್‌ಪುರದಿಂದ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವಾಲಯ ಮತ್ತು ಸರ್ಕಾರದ ಇತರೆ ಅಧಿಕಾರಗಳ ಜೊತೆ ಚರ್ಚಿಸಲಿದ್ದೇನೆ' ಎಂದು ಅವರು ಹೇಳಿದ್ದಾರೆ.

ADVERTISEMENT

ಗರ್ಭಿಣಿಯಾಗಿರುವ ರಜನಿ, ಮಗ ಹಾಗೂ ಇತರೆ ಮೂವರು ಸಂಬಂಧಿಕರೊಂದಿಗೆ ವಿಮಾನ ಮಾರ್ಗವಾಗಿ ಚಂಡೀಗಢಕ್ಕೆ, ಅಲ್ಲಿಂದ ಬಳಿಕ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಫಿರೋಜ್‌ಪುರಕ್ಕೆ ತೆರಳಲಿದ್ದಾರೆ.

'ನಾನು ಎಷ್ಟೊಂದು ಆತಂಕಗೊಂಡಿದ್ದೇನೆ ಎಂದು ನಿಮಗೆ ಹೇಳಲು ಸಾಧ್ಯವಿಲ್ಲ. ನೀವು ಗಾಬರಿಯಾಗಬೇಡಿ ಎಂದಷ್ಟೇ ಬಿಎಸ್‌ಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತು ಸ್ಪಷ್ಟತೆಯಿಲ್ಲ. ನಾನು ತುಂಬಾನೇ ಕಳವಳಗೊಂಡಿದ್ದೇನೆ' ಎಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಷ್ರಾ ಮೂಲದವರಾದ ಯೋಧನ ಪತ್ನಿ ಹೇಳಿದ್ದಾರೆ.

'ನಾನು ತುಂಬಾ ಒತ್ತಡದಲ್ಲಿದ್ದೇನೆ. ಇಂದಿಗೆ ಐದು ದಿನಗಳಾಗಿವೆ. ಯಾವುದೇ ಅಪ್‌ಡೇಟ್ ಬಂದಿಲ್ಲ' ಎಂದು ಪತ್ನಿ ಕಳವಳ ವ್ಯಕ್ತಪಡಿಸಿದ್ದಾರೆ.

ಯೋಧನ ಬಿಡುಗಡೆಗಾಗಿ ಭಾರತ ಹಾಗೂ ಪಾಕಿಸ್ತಾನದ ಗಡಿ ಭದ್ರತಾ ಪಡೆಗಳು ಗುರುವಾರ ರಾತ್ರಿ 'ಫ್ಲ್ಯಾಗ್ ಮೀಟಿಂಗ್' ನಡೆಸಿತ್ತು. ಆದರೆ ಕುಟುಂಬಕ್ಕೆ ಹೆಚ್ಚಿನ ಮಾಹಿತಿ ಲಭಿಸಿಲ್ಲ.

ಬಿಎಸ್‌ಎಫ್ ಅಧಿಕಾರಿಗಳ ಪ್ರಕಾರ, ಫಿರೋಜ್‌ಪುರ ಗಡಿಯಲ್ಲಿ ಕರ್ತವ್ಯದಲ್ಲಿದ್ದ 182ನೇ ಬೆಟಾಲಿಯನ್‌ನ ಯೋಧ ಸಾಹು, ರೈತರಿಗೆ ಬೆಂಗಾವಲು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮರದ ಕೆಳಗೆ ವಿಶ್ರಾಂತಿ ಪಡೆಯಲು ಹೆಜ್ಜೆ ಹಾಕಿದಾಗ ಆಕಸ್ಮತಾಗಿ ಪಾಕಿಸ್ತಾನದ ಗಡಿಗೆ ಪ್ರವೇಶಿಸಿದ್ದರು. ಅವರನ್ನು ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.