ADVERTISEMENT

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಗೆ ಸ್ಪಷ್ಟ ಬಹುಮತ: ಮಾಯಾವತಿ

ಜಾತೀಯತೆಯ ಮನಸುಗಳಿಂದ ಅಂಬೇಡ್ಕರ್‌ಗೆ ಹುಸಿ ಗೌರವ: ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 4:40 IST
Last Updated 7 ಡಿಸೆಂಬರ್ 2021, 4:40 IST
ಮಾಯಾವತಿ
ಮಾಯಾವತಿ   

ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನಸಭೆಗೆ 2022ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆಯಲಿದ್ದು, ದೃಢ ಸರ್ಕಾರವನ್ನು ರಚಿಸಲಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಸೋಮವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರಾಖಂಡದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಸ್ಪರ್ಧಿಸಲಿದ್ದು, ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳದ ಮೈತ್ರಿಯೊಂದಿಗೆ ಸ್ಪರ್ಧಿಸುವುದಾಗಿ ಹೇಳಿದರು. ಉತ್ತರಾಖಂಡದಲ್ಲಿ ತಮ್ಮ ಪಕ್ಷವು ಉತ್ತಮ ಸಾಧನೆ ಮಾಡಲಿದ್ದು, ಪಂಜಾಬ್‌ನಲ್ಲಿ ಮೈತ್ರಿ ಸರ್ಕಾರ ರಚಿಸುವುದಾಗಿ ಹೇಳಿದರು.

ಅಂಬೇಡ್ಕರ್‌ ಅವರ 65ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮಾನವತಾವಾದದ ನಡೆಯನ್ನು ವಿರೋಧಿಸುತ್ತಲೇ ಬಂದ ಸಂಕುಚಿತ ಮತ್ತು ಜಾತೀಯತೆಯ ಮನಸ್ಸುಗಳು ಈಗ ಅವರೆಡೆಗೆ ಹುಸಿ ಗೌರವ ತೋರುತ್ತಿವೆ’ ಎಂದೂ ವಾಗ್ದಾಳಿ ನಡೆಸಿದರು.

ADVERTISEMENT

ಸಂವಿಧಾನಬದ್ಧವಾಗಿ ಕೆಲಸ ಮಾಡದ ಸರ್ಕಾರಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಅಂದಾಗ ಮಾತ್ರ ಸಂವಿಧಾನಬದ್ಧ ಕೆಲಸಗಳು ಶುರುವಾಗುತ್ತವೆ ಎಂದರು.

‘ಅಂಬೇಡ್ಕರ್‌ ಅವರ ಚಿಂತನೆಗಳನ್ನು ವಿರೋಧಿಸುವವರೇ ಅಧಿಕಾರದಲ್ಲಿದ್ದಾಗ ನಾವು ರಸ್ತೆಗಿಳಿದು ಏನು ಪ್ರಯೋಜನ’ ಎಂದು ಕೇಳಿದ ಮಾಯಾವತಿ, ‘ರಸ್ತೆಗಿಳಿದರೆ ಮಾತ್ರ ಕೆಲಸ ಆಗುವುದಿಲ್ಲ. ಅಧಿಕಾರದಲ್ಲಿರುವವರನ್ನೂ ಬದಲಿಸಬೇಕು. ಅಧಿಕಾರದ ಬದಲಾವಣೆ ಆದಲ್ಲಿ ಸಂವಿಧಾನದ ರಕ್ಷಣೆಯಾಗುತ್ತದೆ’ ಎಂದರು.

ಅಖಿಲೇಶ್‌ ಯಾದವ್‌ ನೇತೃತ್ವದಸಮಾಜವಾದಿ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡ ಮಾಯಾವತಿ, ‘ಅವರ ಅಧಿಕಾರಾ
ವಧಿಯಲ್ಲಿ ಗೂಂಡಾಗಿರಿ ಹಾಗೂ ಮಾಫಿಯಾ ಎಲ್ಲೆ ಮೀರಿತ್ತು ಎಂಬುದನ್ನು ಜನರು ಬಲ್ಲರು’ ಎಂದು ಹೇಳಿದರು.

‘ಬಿಜೆಪಿ ಆಡಳಿತದಲ್ಲಿಯಂತೂ ನಿತ್ಯವೂ ದುರ್ಬಲ ವರ್ಗದವರ ಮೇಲಿನ ದೌರ್ಜನ್ಯ ನಡೆಯುತ್ತಿವೆ. ಈ ವರ್ಗದವರಿಗೆ ಅಂಬೇಡ್ಕರ್‌ ಅವರು ಕಾನೂನಾತ್ಮಕ ಹಕ್ಕುಗಳನ್ನು ನೀಡಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಾತೀಯತೆಯ ಮನಸ್ಥಿತಿಯು ಅವರಿಗೆ ಆ ಹಕ್ಕುಗಳ ಪ್ರಯೋಜನ ಪಡೆಯಲು ಬಿಡುತ್ತಿಲ್ಲ’ ಎಂದು ಆರೋಪಿಸಿದರು.

‘ಅಂಬೇಡ್ಕರ್‌ ಅವರ ಸಮತಾವಾದ ಸಮಾಜದ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಹಾಗೂ ಆತ್ಮಗೌರವಕ್ಕಾಗಿನ ಅಭಿಯಾನವು ತಮ್ಮ ಪಕ್ಷದ ಗುರಿಯಾಗಿದೆ. ಇದನ್ನು ಯಾರೂ ಲಘುವಾಗಿ ಪರಿಗಣಿಸುವಂತಿಲ್ಲ. ಈ ಯಾತ್ರೆಯು ನಿಲ್ಲುವುದೂ ಇಲ್ಲ; ಬಾಗುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.