ADVERTISEMENT

ಕೇಂದ್ರ ಬಜೆಟ್‌: ಬಡವರ ಮೇಲಿನ ‘ಮೌನ ದಾಳಿ’– ಸೋನಿಯಾ ಟೀಕೆ

ಪಿಟಿಐ
Published 6 ಫೆಬ್ರುವರಿ 2023, 16:06 IST
Last Updated 6 ಫೆಬ್ರುವರಿ 2023, 16:06 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕೇಂದ್ರ ಸರ್ಕಾರದ 2023–24ನೇ ಸಾಲಿನ ಬಜೆಟ್‌ ಅನ್ನು ಬಡವರ ಮೇಲಿನ ‘ಮೌನ ದಾಳಿ’ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಅವರು ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವರು ‘ವಿಶ್ವ ಗುರು’ ಮತ್ತು ‘ಅಮೃತ ಕಾಲ’ ಎಂದು ಜೋರಾಗಿ ಪಠಿಸುತ್ತಿದ್ದಾರೆ. ಆದರೆ ಅವರ ನೆಚ್ಚಿನ ಮತ್ತು ಮೆಚ್ಚಿನ ಉದ್ಯಮಿಯ ಮೇಲೆ ಹಣಕಾಸಿನ ಹಗರಣಗಳು ಸ್ಫೋಟಗೊಳ್ಳುತ್ತಿವೆ’ ಎಂದು ಅವರು ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ಉಲ್ಲೇಖಿಸಿದ್ದಾರೆ.

‘ತನ್ನ ಕೆಲ ಶ್ರೀಮಂತ ಗೆಳೆಯರಿಗೆ ಪ್ರಯೋಜನ ಮಾಡಿಕೊಡಲು ಪ್ರಧಾನಿ ಅನುಸರಿಸಿದ ನೀತಿಯು ಬಡ ಮತ್ತು ಮಧ್ಯಮ ವರ್ಗದವರಿಗೆ ದುಬಾರಿಯಾಗಿ ಪರಿಣಮಿಸಿ, ನಿರಂತರ ಅನಾಹುತಗಳನ್ನು ಉಂಟು ಮಾಡಿದೆ. ನೋಟು ಅಮಾನ್ಯೀಕರಣ, ಕೆಟ್ಟದಾಗಿ ವಿನ್ಯಾಸಗೊಳಿಸಿದ ಜಿಎಸ್‌ಟಿ, ಮೂರು ಕೃಷಿ ಕಾನೂನುಗಳನ್ನು ತರಲು ನಡೆಸಿದ ವಿಫಲ ಪ್ರಯತ್ನ ಹಾಗೂ ಬಳಿಕ ಕೃಷಿಯನ್ನು ನಿರ್ಲಕ್ಷಿಸಿದ್ದರಿಂದ ಸಾಕಷ್ಟು ತೊಂದರೆಗಳನ್ನು ದೇಶದ ಜನರು ಎದುರಿಸಬೇಕಾಯಿತು’ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರವು ತನ್ನ ವಿನಾಶಕಾರಿ ಖಾಸಗೀಕರಣ ಧೋರಣೆಯಿಂದ ದೇಶದ ಅಮೂಲ್ಯವಾದ ರಾಷ್ಟ್ರೀಯ ಆಸ್ತಿಯನ್ನು ಆಯ್ದ ಖಾಸಗಿಯವರ ಕೈಗಳಿಗೆ ಅಗ್ಗದ ದರದಲ್ಲಿ ಹಸ್ತಾಂತರಿಸಿ, ನಿರುದ್ಯೋಗ ಸಮಸ್ಯೆ ತೀವ್ರವಾಗುವಂತೆ ಮಾಡಿದೆ. ಇದರಿಂದ ಪ್ರಮುಖವಾಗಿ ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯದವರಿಗೆ ಹೆಚ್ಚಿನ ತೊಂದರೆಯಾಗಿದೆ’ ಎಂದು ಅವರು ದೂರಿದ್ದಾರೆ.

‘ಬಡವರು ಮತ್ತು ಮಧ್ಯಮ ವರ್ಗದ ಭಾರತೀಯರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಲ್‌ಐಸಿ ಮತ್ತು ಎಸ್‌ಬಿಐ ನಂತಹ ಸಾರ್ವಜನಿಕ ಸಂಸ್ಥೆಗಳನ್ನು ನಂಬಿ ಉಳಿತಾಯ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಹಣವನ್ನು ತನ್ನ ಆಯ್ದ ಸ್ನೇಹಿತರ ಒಡೆತನದ ಕಳಪೆ ನಿರ್ವಹಣೆಯ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಬಡ, ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಅವರು ಅದಾನಿ ಸಮೂಹದ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿ ದೂರಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.