
ಸಂಸತ್ ಭವನ
ನವದೆಹಲಿ: ಬಜೆಟ್ ಅಧಿವೇಶನದಲ್ಲಿ ಬಿ–ಜಿ ರಾಮ್ ಜಿ ಕಾಯ್ದೆ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ನಿರಾಕರಿಸಿದೆ.
ಇಂದು (ಮಂಗಳವಾರ) ನಡೆದ ಸರ್ವಪಕ್ಷಗಳ ಸಭೆಯಲ್ಲಿ ಬುಧವಾರದಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಿ–ಜಿ ರಾಮ್ ಜಿ ಕಾಯ್ದೆ ಹಾಗೂ ಎಸ್‌ಐಆರ್ ಕುರಿತು ಚರ್ಚೆಗೆ ವಿಪಕ್ಷಗಳು ಬೇಡಿಕೆ ಮುಂದಿರಿಸಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 'ಈ ಎರಡೂ ವಿಷಯಗಳ ಕುರಿತು ಈಗಾಗಲೇ ಉಭಯ ಸದನಗಳಲ್ಲಿ ಚರ್ಚಿಸಲಾಗಿದೆ' ಎಂದು ಹೇಳಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಒಂದು ದಿನಕ್ಕೂ ಮೊದಲು ಕರೆಯಲಾದ ಸರ್ವಪಕ್ಷಗಳ ಸಭೆಯ ಬಳಿಕ ರಿಜಿಜು ಮಾತನಾಡಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್‌ನ ಜೈರಾಮ್ ರಮೇಶ್, ಸಿಪಿಐ(ಎಂ)ನ ಜಾನ್ ಬ್ರಿಟಾಸ್ ಸೇರಿದಂತೆ ಪ್ರಮುಖರು ಭಾಗವಹಿಸಿದರು.
ಭಾರತದ ಮೇಲೆ ಅಮೆರಿಕದ ಸುಂಕ ಹೇರಿಕೆ, ವಿದೇಶಾಂಗ ನೀತಿ ವಿಷಯಗಳು, ವಾಯು ಮಾಲಿನ್ಯ, ಆರ್ಥಿಕತೆ, ಸಾಮಾಜಿಕ ಮಾಧ್ಯಮಗಳ ನಿರ್ಬಂಧದ ಕುರಿತಾಗಿಯೂ ಚರ್ಚೆ ನಡೆಸುವಂತೆ ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.
ಜನವರಿ 28ರಿಂದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.