ADVERTISEMENT

ಬುಲಂದ್‌ಶಹರ್: ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ಬಸ್ ಹರಿದು 7 ಸಾವು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 5:22 IST
Last Updated 11 ಅಕ್ಟೋಬರ್ 2019, 5:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಕಲ್ಲುಹಾಸಿನ ಮೇಲೆ ಮಲಗಿದ್ದ ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ಬಸ್ ಹರಿದು ಏಳು ಮಂದಿ ಸಾವಿಗೀಡಾಗಿದ್ದಾರೆ. ಗಂಗಾ ನದಿ ತೀರದ ಬಳಿ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ನಾಲ್ಕು ಮಹಿಳೆಯರು ಮತ್ತು ಮೂವರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾತಾ ವೈಷ್ಣೋದೇವಿ ದರ್ಶನ ಮುಗಿಸಿ ಹತರಸ್ ಜನ್‌ಪದ್‌ಗೆ ಮರಳಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಅಕ್ಟೋಬರ್ 3ರಂದು ಮೋಹನ್‌ಪುರದಿಂದ 56 ಮಂದಿ ಯಾತ್ರಾರ್ಥಿಗಳು ವೈಷ್ಣೋದೇವಿ ದರ್ಶನಕ್ಕೆ ಹೊರಟಿದ್ದರು. ದರ್ಶನ ಮುಗಿಸಿ ಮರಳಿ ಬರುತ್ತಿದ್ದಾಗ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಆಗ್ರಾ-ಮೊರಾದಾಬಾದ್ ರಾಷ್ಟ್ರೀಯ ಹೆದ್ದಾರಿ ಬಳಿ ಮುಂಜಾನೆ 2.50ಕ್ಕೆ ನಿಲ್ಲಿಸಿತ್ತು.

ಆ ಹೊತ್ತಲ್ಲಿ ಬಸ್‌ನಿಂದ ಇಳಿದ ಮಹಿಳೆಯರು ರಸ್ತೆ ಬದಿಯಲ್ಲಿರುವ ಕಲ್ಲುಹಾಸಿನ ಮೇಲೆ ಮಲಗಿದ್ದಾರೆ. ಹೀಗೆ ಮಲಗಿದ್ದ ಜನರ ಮೇಲೆ ವೇಗವಾಗಿ ಬಂದ ಬಸ್ಸೊಂದು ಹರಿದಿದೆ. ತಕ್ಷಣವೇ ಇವರು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.

ADVERTISEMENT

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.