ADVERTISEMENT

Nagpur Violence | ಪ್ರಮುಖ ಆರೋಪಿಯ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ

ಪಿಟಿಐ
Published 24 ಮಾರ್ಚ್ 2025, 6:08 IST
Last Updated 24 ಮಾರ್ಚ್ 2025, 6:08 IST
<div class="paragraphs"><p>ಬುಲ್ಡೋಜರ್ ಕಾರ್ಯಾಚರಣೆ</p></div>

ಬುಲ್ಡೋಜರ್ ಕಾರ್ಯಾಚರಣೆ

   

ಮುಂಬೈ: ನಾಗ್ಪುರ ಗಲಭೆ ಪ್ರಕರಣದ ಪ್ರಮುಖ ಆರೋಪಿ ಫಾಹೀಮ್‌ ಖಾನ್‌ ಅವರಿಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಬಿಗಿ ಪೊಲೀಸ್‌ ಭದ್ರತೆ ನಡುವೆ ಸೋಮವಾರ ನೆಲಸಮಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಮತ್ತೊಬ್ಬ ಆರೋಪಿ ಯೂಸುಫ್‌ ಶೇಖ್‌ ಅವರ ಮಹಲ್‌ ಪ್ರದೇಶದಲ್ಲಿರುವ ಮನೆಯ ಅನಧಿಕೃತ ಭಾಗವನ್ನೂ ಕೆಡವಲಾಯಿತು ಎಂದು ತಿಳಿಸಿದರು.

ADVERTISEMENT

ಅಲ್ಪಸಂಖ್ಯಾತ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ನಾಯಕ ಫಾಹೀಮ್‌ ಖಾನ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ.

ಮನೆ ನಿರ್ಮಾಣ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಖಾನ್‌ ಅವರಿಗೆ ನಾಗ್ಪುರ ನಗರಸಭೆಯು ಕೆಲ ದಿನಗಳ ಹಿಂದೆ ನೋಟಿಸ್‌ ಕಳುಹಿಸಿತ್ತು.

ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ಮೂರು ಜೆಸಿಬಿಗಳ ಮೂಲಕ ಯಶೋಧರಾ ನಗರದ ಸಂಜಯ್‌ ಭಾಗ್‌ ಕಾಲೋನಿಯಲ್ಲಿರುವ ಖಾನ್‌ ಅವರ ಮನೆಯನ್ನು ನೆಲಸಮ ಮಾಡುವ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್‌ ಭದ್ರತೆಯ ಜೊತೆಗೆ, ಇಡೀ ಪ್ರದೇಶದ ಮೇಲೆ ಡ್ರೋನ್ ಕಣ್ಗಾವಲಿಡಲಾಗಿತ್ತು.

ಮನೆಯು ಖಾನ್‌ ಅವರ ತಾಯಿಯ ಹೆಸರಿನಲ್ಲಿ ನೋಂದಣಿಯಾಗಿದೆ. ನೆಲಸಮ ಕಾರ್ಯಾಚರಣೆ ಬಗ್ಗೆ ಒಂದು ದಿನ ಮೊದಲೇ ನೋಟಿಸ್‌ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮೊಘಲ್ ದೊರೆ ಔರಂಗಜೇಬ್‌ ಸಮಾಧಿ ತೆರವಿಗೆ ಆಗ್ರಹಿಸಿ ಹಿಂದೂ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಪವಿತ್ರ ‘ಛಾದರ್‌’ ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಬಳಿಕ ಮಾ.17ರಂದು ನಾಗ್ಪುರದಲ್ಲಿ ಹಿಂಸಾಚಾರ ನಡೆದಿತ್ತು. ನಗರದ ಹಲವು ಭಾಗಗಳಲ್ಲಿ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದರು, ಪೆಟ್ರೋಲ್‌ ಬಾಂಬ್‌ ಎಸೆದಿದ್ದರು. ಹಿಂಸಾಚಾರದಲ್ಲಿ 33 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಗಲಭೆಗೆ ಸಂಬಂಧಿಸಿದಂತೆ ಖಾನ್ ಸೇರಿ ನೂರಾರು ಜನರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.