ADVERTISEMENT

ಯೋಗಿ ಪ್ರಚಾರ ಸ್ಥಳಕ್ಕೆ ಬೀಡಾಡಿ ದನಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 17:35 IST
Last Updated 22 ಫೆಬ್ರುವರಿ 2022, 17:35 IST
ಬೀಡಾಡಿ ದನಗಳು
ಬೀಡಾಡಿ ದನಗಳು   

ಬಾರಾಬಂಕಿ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರದ ಗೋಹತ್ಯೆ ನಿಷೇಧ ನೀತಿ ಮತ್ತು ಅದರಿಂದ ಉಂಟಾಗಿರುವ ಬೀಡಾಡಿ ದನಗಳ ಸಮಸ್ಯೆಯ ಬಗ್ಗೆ ಬಾರಾಬಂಕಿಯ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಯೋಗಿ ಅವರು ಇಲ್ಲಿ ಮಂಗಳವಾರ ಪ್ರಚಾರ ಭಾಷಣ ನಡೆಸುತ್ತಿದ್ದರು. ಆ ಮೈದಾನದ ಸುತ್ತ ರೈತರು ನೂರಾರು ಬೀಡಾಡಿ ದನಗಳನ್ನು ಬಿಟ್ಟಿದ್ದಾರೆ.

‘ಐದು ವರ್ಷಗಳಿಂದ ಈ ಸಮಸ್ಯೆ ಬಿಗಡಾಯಿಸಿದೆ. ಬೀಡಾಡಿ ದನಗಳಿಂದ ರೈತರು ಬಹಳನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಇಲ್ಲಿ ಯೋಗಿ ಅವರ ಭಾಷಣ ನಿಗದಿಯಾಗಿತ್ತು. ಅಲ್ಲಿ ಬೀಡಾಡಿ ದನಗಳನ್ನು ಬಿಡಬೇಕು ಎಂದು ರೈತರು ನಿರ್ಧರಿಸಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಇರುವ ಎಲ್ಲಾ ಬೀಡಾಡಿ ದನಗಳನ್ನು ಒಂದೆಡೆ ಕೂಡಿ ಹಾಕಲಾಗಿತ್ತು. ಯೋಗಿ ಅವರ ಭಾಷಣ ನಡೆಯುತ್ತಿದ್ದ ವೇಳೆ, ಎಲ್ಲಾ ದನಗಳನ್ನು ಬಿಡಲಾಯಿತು’ ಎಂದು ಇಲ್ಲಿನ ರೈತ ನಾಯಕರಮಣ್‌ದೀಪ್ ಸಿಂಗ್ ಮನ್‌ ಎಂಬುವವರು ಟ್ವೀಟ್ ಮಾಡಿದ್ದಾರೆ. ನೂರಾರು ಬೀಡಾಡಿ ದನಗಳು ಮೈದಾನವೊಂದರತ್ತ ನುಗ್ಗುತ್ತಿರುವ ವಿಡಿಯೊವನ್ನು ಅವರು ಟ್ವೀಟ್ ಮಾಡಿದ್ದಾರೆ.

ಈ ಘಟನೆ ಬಗ್ಗೆ ಯೋಗಿ ಆದಿತ್ಯನಾಥ ಅವರು ಪ್ರತಿಕ್ರಿಯೆ ನೀಡಿದ್ದಾರೆ.‘ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಶೀಘ್ರವೇ ಸಮಸ್ಯೆಯನ್ನು ಪರಿಹರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.