ADVERTISEMENT

ಉಪ ಚುನಾವಣೆ: ಕಾಶ್ಮೀರದಲ್ಲಿ ಆಡಳಿತರೂಢ ಎನ್‌ಸಿಗೆ ಮುಖಭಂಗ

ಪಿಟಿಐ
Published 14 ನವೆಂಬರ್ 2025, 15:52 IST
Last Updated 14 ನವೆಂಬರ್ 2025, 15:52 IST
<div class="paragraphs"><p>ಜಮ್ಮುವಿನ ನಗ್ರೋಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ದೇವ್‌ಯಾನಿ ರಾಣಾ ಗೆಲುವಿನ ಬಳಿಕ ಸಂಭ್ರಮಿಸಿದರು</p></div>

ಜಮ್ಮುವಿನ ನಗ್ರೋಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ದೇವ್‌ಯಾನಿ ರಾಣಾ ಗೆಲುವಿನ ಬಳಿಕ ಸಂಭ್ರಮಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ಇದೇ ನವೆಂಬರ್‌ 11ರಂದು ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತರೂಢ ಪಕ್ಷವು ನಾಲ್ಕು ಕ್ಷೇತ್ರಗಳಲ್ಲಿ ಸೋಲುಂಡಿದೆ. ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ 1 ಸ್ಥಾನ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್‌ ಅಬ್ದುಲ್ಲಾ ಕುಟುಂಬ ಪ್ರಾಬಲ್ಯ ಹೊಂದಿದ್ದ ಬಡಗಾಮ್‌ನಲ್ಲಿ ವಿರೋಧ ಪಕ್ಷ ಪಿಡಿಪಿ ಐತಿಹಾಸಿಕ ಗೆಲುವು ಪಡೆದಿದೆ.

ADVERTISEMENT

ಕಾಂಗ್ರೆಸ್‌, ಬಿಜೆಪಿ ಹೆಚ್ಚುವರಿಯಾಗಿ ಒಂದು ಸೀಟು ಪಡೆದಿದ್ದರೆ, ಆಮ್‌ಆದ್ಮಿ, ಜೆಎಂಎಂ ಪಕ್ಷವು ತನ್ನ ಕ್ಷೇತ್ರಗಳನ್ನು ಉಳಿಸಿಕೊಂಡಿದೆ. 

ಮಿಜೋರಾಂನ ‘ಡಂಪಾ’ ಕ್ಷೇತ್ರದಲ್ಲಿ ಮಿಜೋ ನ್ಯಾಷನಲ್‌ ಫ್ರಂಟ್‌(ಎಂಎನ್‌ಎಫ್‌)ನ ಆರ್‌.ಲಲ್ತಾಂಗ್ಲಿಯಾನ ತನ್ನ ಪ್ರತಿಸ್ಪರ್ಧಿ ಆಡಳಿತರೂಢ ಜೋರಮ್‌ ಪೀಪಲ್ಸ್‌ ಮೂವ್‌ಮೆಂಟ್‌ನ ವನ್ಲಾಸೈಲೊವಾ ವಿರುದ್ಧ 562 ಮತಗಳಿಂದ ಗೆದ್ದಿದ್ದಾರೆ.  

ರಾಜಸ್ಥಾನದ ‘ಅಂತಾ’ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಮೋದ್‌ ಜೈನ್‌ ಅವರು ಪ್ರತಿಸ್ಪರ್ಧಿ ಬಿಜೆಪಿಯ ಮೊರ್ಪಲ್‌ ಸುಮನ್‌ ಅವರನ್ನು 15,612 ಮತಗಳಿಂದ ಮಣಿಸಿದ್ದಾರೆ. ಕ್ರಿಮಿನಲ್‌ ಪ್ರಕರಣದಲ್ಲಿ ಬಿಜೆಪಿ ಶಾಸಕ ಕನ್ವರ್ ಲಾಲ್‌ ಮೀನಾ ಅನರ್ಹಗೊಂಡಿದ್ದರಿಂದ ಉಪಚುನಾವಣೆ ನಡೆದಿತ್ತು.

ತೆಲಂಗಾಣದ ‘ಜುಬಿಲಿ ಹಿಲ್ಸ್‌’ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿ.ನವೀನ್‌ ಯಾದವ್‌ ಅವರು ಬಿಆರ್‌ಎಸ್‌ನ ಮಂಗಾಟಿ ಸುನೀತಾ ಅವರನ್ನು 24,729 ಮತಗಳಿಂದ ಸೋಲಿಸಿದ್ದಾರೆ. ಬಿಆರ್‌ಎಸ್‌ ಶಾಸಕ ಮಂಗಾಟಿ ಗೋಪಿನಾಥ ನಿಧನದಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.

ಒಡಿಶಾದ ‘ನುಆಪಾಡಾ’ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಯ್‌ ಧೋಲಾಕಿಯಾ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಘಾಸಿರಾಮ್‌ ಮಾಂಝಿ ವಿರುದ್ಧ 83,748 ಅಂತರದಿಂದ ಗೆಲುವು ಪಡೆದಿದ್ದಾರೆ. ಬಿಜೆಡಿ ಮಾಜಿ ಶಾಸಕ ರಾಜೇಂದ್ರ ಧೋಲಾಕಿಯಾ ನಿಧನದಿಂದ ಉಪಚುನಾವಣೆ ನಡೆದಿತ್ತು. ಜಯ್‌ ಅವರು ರಾಜೇಂದ್ರ ಅವರ ಮಗ

ಪಂಜಾಬ್‌ನ ‘ತರನ್‌ ತಾರನ್‌’ ಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷದ ಹರ್ಮೀತ್‌ ಸಿಂಗ್‌ ಸಂಧು ಗೆಲುವು ಪಡೆದಿದ್ದಾರೆ. ಜಾರ್ಖಂಡ್‌ನ ‘ಗಾಟ್‌ಶೀಲಾ’ ಕ್ಷೇತ್ರದಲ್ಲಿ ಜೆಎಂಎಂ ಸೋಮೇಶ್‌ ಚಂದ್ರ ಸೊರೇನ್‌ ಬಿಜೆಪಿಯ ಬಾಬುಲಾಲ್‌ ಸೊರೇನ್ ವಿರುದ್ಧ 38,500 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ.

ತೆಲಂಗಾಣದ ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನವೀನ್‌ ಯಾದವ್‌ ಗೆಲುವು ಪಡೆದ ಬಳಿಕ ಪಕ್ಷದ ಕಾರ್ಯಕರ್ತರು ಹೈದರಾಬಾದ್‌ನ ಪಕ್ಷದ ಕಚೇರಿ ಮುಂಭಾಗದಲ್ಲಿ ಕುಣಿದು ಸಂಭ್ರಮಿಸಿದರು

ಸಿ.ಎಂ ಅಬ್ದುಲ್ಲಾಗೆ ಹಿನ್ನಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ 1957ರಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆದ ದಿನದಿಂದಲೂ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಹಿಡಿತದಲ್ಲಿದ್ದ ‘ಬಡಗಾಮ್‌’ ವಿಧಾನಸಭಾ ಕ್ಷೇತ್ರದಲ್ಲಿ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಅಗಾ ಸೈಯದ್‌ ಮುಂತಾಜಿರ್‌ ಅವರು ಎನ್‌.ಸಿಯ ಅಗಾ ಸೈಯದ್‌ ಮೆಹಮೂದ್‌ ವಿರುದ್ಧ 4478 ಮತಗಳಿಂದ ಗೆಲುವು ಪಡೆದಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಡಗಾಮ್‌ ಹಾಗೂ ಗಂದೇರ್‌ಬಾಲ್‌ ಕ್ಷೇತ್ರದಿಂದ ಗೆಲುವು ಪಡೆದಿದ್ದರು. ನಂತರ ಬಡಗಾಮ್‌ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಮ್ಮುವಿನ ‘ನಗ್ರೋಟಾ’ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆದಿದೆ. ಬಿಜೆಪಿಯ ದೇವ್‌ಯಾನಿ ರಾಣಾ ಅವರು ತಮ್ಮ ಪ್ರತಿಸ್ಪರ್ಧಿ ಜಮ್ಮು ಕಾಶ್ಮೀರ್‌ ನ್ಯಾಷನಲ್‌ ಫ್ಯಾಂಥರ್ಸ್‌ನ ಅಭ್ಯರ್ಥಿ ಹರ್ಷ್‌ದೇವ್‌ ಸಿಂಗ್‌ ವಿರುದ್ಧ 24647 ಮತಗಳಿಂದ ಗೆದ್ದಿದ್ದಾರೆ. ಎನ್‌.ಸಿ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ. ದೇವ್‌ಯಾನಿ ಮಾಜಿ ಶಾಸಕ ದೇವೇಂದರ್‌ ಸಿಂಗ್‌ ಠಾಣಾ ಅವರ ಮಗಳು. ದೇವೇಂದರ್‌ ನಿಧನದಿಂದ ಉಪಚುನಾವಣೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.